ಸಾಮಾಜಿಕ ಜಾಲತಾಣದಲ್ಲಿ ಸ್ಪಂದನೆ: ಕಾರ್ಮಿಕನ ಕುಟುಂಬಕ್ಕೆ ಹರಿದು ಬಂದ ನೆರವೆಷ್ಟು ಗೊತ್ತೇ?

Update: 2018-09-20 05:00 GMT

ಹೊಸದಿಲ್ಲಿ, ಸೆ.20: ಕಳೆದ ವಾರ ದೆಹಲಿಯಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಗ್ಗದ ಸಹಾಯದಿಂದ ಕೆಳಗೆ ಇಳಿದ ಕಾರ್ಮಿಕನ ಪಾಲಿಗೆ ಅದೇ ಹಗ್ಗ ಮೃತ್ಯುವಾಗಿತ್ತು. ದಯನೀಯ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಸ್ಪಂದನೆ ಸಿಕ್ಕಿದ್ದು, 50 ಲಕ್ಷ ರೂಪಾಯಿಗೂ ಅಧಿಕ ನೆರವು  ಹರಿದು ಬಂದಿದೆ.

ಮೃತಪಟ್ಟ ಅನಿಲ್ (37)ನ 11 ವರ್ಷದ ಮಗ ಗೌರವ್, ತಂದೆಯ ಅಂತ್ಯಸಂಸ್ಕಾರದ ವೇಳೆ ರೋdiಸುತ್ತಿರುವ ಚಿತ್ರವನ್ನು ವರದಿಗಾರರೊಬ್ಬರು ಟ್ವೀಟ್ ಮಾಡಿದ್ದರು. ಇದು ಟ್ವಿಟ್ಟರ್ ಬಳಕೆದಾರರು ಈ ಕುಟುಂಬಕ್ಕಾಗಿ ಹಣ ಸಂಗ್ರಹಿಸಲು ಪ್ರೇರಣೆಯಾಯಿತು.

ಅನಿಲ್ ಕುಟುಂಬದ ದಯನೀಯ ಸ್ಥಿತಿ ಎಷ್ಟಿತ್ತೆಂದರೆ, ಶವದ ಅಂತ್ಯಸಂಸ್ಕಾರಕ್ಕೂ ಅವರ ಬಳಿ ಹಣ ಇರಲಿಲ್ಲ. ಶವಸಂಸ್ಕಾರಕ್ಕೆ ನೆರೆಯವರು ಕಟ್ಟಿಗೆ ಖರೀದಿಸಿ ಕೊಟ್ಟರು. ಅನಿಲ್‌ನ ನಾಲ್ಕು ವರ್ಷದ ಮಗ ಶಿವಮ್, ತಂದೆ ಸಾಯುವ ನಾಲ್ಕು ದಿನ ಮೊದಲು ತೀವ್ರ ನ್ಯುಮೋನಿಯಾದಿಂದ ಬಳಲಿ ಮೃತಪಟ್ಟಿದ್ದ. ಆತನ ಚಿಕಿತ್ಸೆಗೆ ಕುಟುಂಬದ ಬಳಿ ಚೈತನ್ಯವಿರಲಿಲ್ಲ.

ಆನ್‌ಲೈನ್ ಕ್ರೌಡ್‌ ಫಂಡಿಂಗ್ ಪ್ಲಾಟ್‌ಫಾರಂ ಮೂಲಕ ಇದುವರೆಗೆ 2,422 ಮಂದಿ ದಾನಿಗಳು 51.43 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ಪತ್ನಿ ರಾಣಿ, "ಇನ್ನಾದರೂ ನನ್ನ ಮೂವರು ಮಕ್ಕಳನ್ನು ಶಾಲೆಗೆ ಕಳುಹಿಸಬಹುದು" ಎಂದು ಹೇಳಿದ್ದಾರೆ. ಮೂರು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಅನಿಲ್ ಮೃತಪಟ್ಟ ಬಳಿಕ ಮನೆಯಿಂದ ನಮ್ಮನ್ನು ಹೊರಹಾಕುತ್ತಾರೆ ಎಂದುಕೊಂಡಿದ್ದೆವು. ಕುಟುಂಬಕ್ಕೆ ಅವರೊಬ್ಬರೇ ಜೀವನಾಧಾರವಾಗಿದ್ದರು" ಎಂದು ವಿವರಿಸಿದ್ದಾರೆ.

ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರಂ ಈಗಾಗಲೇ ಪಡಿತರ ಖರೀದಿಸಿಕೊಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಒಂದು ಸೈಕಲ್ ಮತ್ತು ಇತರ ಅಗತ್ಯ ವಸ್ತುಗಳು ಸಿಗಲಿವೆ. ಜನ ಮಕ್ಕಳಿಗಾಗಿ ದೇಣಿಗೆ ನೀಡಿದ್ದಾರೆ. ಇದೀಗ ಮಕ್ಕಳನ್ನು ಒಳ್ಳೆಯ ಖಾಸಗಿ ಶಾಲೆಗೆ ಕಳುಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಗೌರವ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 7 ಸಾವಿರ ಮರುಟ್ವೀಟ್‌ಗಳಾಗಿವೆ. ಇದರಿಂದ ಉತ್ತೇಜಿತವಾದ ಸ್ವಯಂಸೇವಾ ಸಂಸ್ಥೆ ಉದಯ್ ಫೌಂಡೇಷನ್, ಕುಟುಂಬಕ್ಕೆ ನೆರವು ಸ್ವೀಕರಿಸಲು ಬ್ಯಾಂಕ್ ಖಾತೆ ತೆರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News