ಕೊಹ್ಲಿ ‘ಖೇಲ್‌ರತ್ನ’ ಪಡೆಯಲಿರುವ 3ನೇ ಕ್ರಿಕೆಟಿಗ

Update: 2018-09-20 18:33 GMT

ಹೊಸದಿಲ್ಲಿ, ಸೆ.20: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ಚಾಂಪಿಯನ್ ಮಹಿಳಾ ವೇಟ್‌ಲಿಫ್ಟರ್ ಸೈಖೋಮ್ ಮಿರಾಬಾಯಿ ಚಾನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 ಬಿಸಿಸಿಐ ಎಪ್ರಿಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ, ರಾಹುಲ್ ದ್ರಾವಿಡ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು.

ವಿಶ್ವದ ನಂ.1 ಟೆಸ್ಟ್ ದಾಂಡಿಗ ಕೊಹ್ಲಿ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾದ ಮೂರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್(1997) ಹಾಗೂ ಎಂ.ಎಸ್. ಧೋನಿ(2007) ಈ ಗೌರವಕ್ಕೆ ಪಾತ್ರರಾಗಿದ್ದರು.

ಕಳೆದ 3 ವರ್ಷಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ 2016 ಹಾಗೂ 2017ರಲ್ಲಿ ಖೇಲ್‌ರತ್ನಗೆ ನಾಮನಿರ್ದೇಶನಗೊಂಡಿದ್ದರೂ ಪ್ರಶಸ್ತಿ ವಂಚಿತಗೊಂಡಿದ್ದರು. 2016ರಲ್ಲಿ ಸಾಕ್ಷಿ ಮಲಿಕ್, ಪಿ.ವಿ. ಸಿಂಧು ಹಾಗೂ ದೀಪಾ ಕರ್ಮಾಕರ್‌ಗೆ ರಿಯೋ ಒಲಿಂಪಿಕ್ ಗೇಮ್ಸ್ ನಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನಕ್ಕೆ ಈ ಗೌರವ ಲಭಿಸಿತ್ತು. ಕಳೆದ ವರ್ಷ ಖೇಲ್‌ರತ್ನ ಪ್ರಶಸ್ತಿಯನ್ನು ಭಾರತದ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ಹಾಗೂ ಪ್ಯಾರಾ-ಅಥ್ಲೀಟ್ ದೇವೇಂದ್ರ ಜಜಾರಿಯಾ ಅವರು ಜಂಟಿಯಾಗಿ ಪಡೆದಿದ್ದರು.

 ವಿರಾಟ್ ಕೊಹ್ಲಿ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರನಾಗಿದ್ದರು. ಕೊಹ್ಲಿ 71 ಟೆಸ್ಟ್ ಪಂದ್ಯಗಳಲ್ಲಿ 23 ಶತಕಗಳ ಸಹಿತ 6,147 ರನ್ ಹಾಗೂ 211 ಏಕದಿನ ಪಂದ್ಯಗಳಲ್ಲಿ 35 ಶತಕಗಳ ಸಹಿತ 9,779 ರನ್ ಗಳಿಸಿದ್ದಾರೆ. ಚಾನು ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 48 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಗಾಯದ ಸಮಸ್ಯೆಯಿಂದಾಗಿ ಏಶ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ.

 ಚಾನು ಖೇಲ್‌ರತ್ನ ಪ್ರಶಸ್ತಿ ಪಡೆದುಕೊಂಡಿರುವ ಮೂರನೇ ವೇಟ್‌ಲಿಫ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ಕರ್ಣಂ ಮಲ್ಲೇಶ್ವರಿ(1995) ಹಾಗೂ ಎನ್.ಕುಂಜರಾಣಿ(1996) ಈ ಹಿಂದೆ ಈ ಗೌರವಕ್ಕೆ ಭಾಜನರಾಗಿದ್ದರು.

 ಆರ್ಚರಿ ಕೋಚ್ ಜೀವನ್‌ಜೋತ್ ಸಿಂಗ್ ತೇಜ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಬುಧವಾರ ಕೈಬಿಡಲಾಗಿದೆ. 2015ರಲ್ಲಿ ಕೊರಿಯಾದಲ್ಲಿ ನಡೆದ ವಿಶ್ವ ಯುನಿವರ್ಸಿಟಿ ಗೇಮ್ಸ್ ನಲ್ಲಿ ಅಶಿಸ್ತಿನ ವರ್ತನೆಗೆ ಸಂಬಂಧಿಸಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಹಿನ್ನೆಲೆಯಲ್ಲಿ ತೇಜ್ ಹೆಸರನ್ನು ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News