ಉಗ್ರರ ಉಪಟಳ: ಭಾರತಕ್ಕೆ ಮೂರನೇ ಸ್ಥಾನ!

Update: 2018-09-22 03:42 GMT

ಹೊಸದಿಲ್ಲಿ, ಸೆ.22: ಜಗತ್ತಿನಲ್ಲಿ ಇರಾಕ್ ಹಾಗೂ ಅಫ್ಘಾನಿಸ್ತಾನ ಹೊರತುಪಡಿಸಿದರೆ ಅತ್ಯಧಿಕ ಉಗ್ರರ ಉಪಟಳಕ್ಕೆ ಒಳಗಾಗಿರುವ ದೇಶ ಎಂಬ ಕುಖ್ಯಾತಿ ಭಾರತಕ್ಕೆ ಸತತ ಎರಡನೇ ವರ್ಷ ಪಾತ್ರವಾಗಿದೆ. ಸಿಪಿಐ-ಮಾವೋವಾದಿ ಉಗ್ರರು ದೇಶದಲ್ಲಿ 53% ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದಾರೆ. ಇಸ್ಲಾಮಿಕ್ ಸ್ಟೇಟ್, ತಾಲಿಬಾನ್ ಹಾಗೂ ಅಲ್-ಶಬಾಬ್ ಹೊರತುಪಡಿಸಿದರೆ ಈ ಸಂಘಟನೆ ವಿಶ್ವದ ನಾಲ್ಕನೇ ಭಯಾನಕ ಉಗ್ರಗಾಮಿ ಗುಂಪು ಎನಿಸಿಕೊಂಡಿದೆ.

ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ಇದು ಬಹಿರಂಗವಾಗಿದೆ. 2015ರವರೆಗೆ ಪಾಕಿಸ್ತಾನ, ಭಯೋತ್ಪಾದಕ ಕೃತ್ಯಗಳಿಂದ ತೊಂದರೆಗೊಳಗಾಗುತ್ತಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿತ್ತು.

ಅಮೆರಿಕದ ರಕ್ಷಣಾ ಇಲಾಖೆ ಈ ಅಧ್ಯಯನಕ್ಕೆ ನ್ಯಾಷನಲ್ ಕನ್‌ಸ್ಟೋರಿಯಂ ಫಾರ್ ಸ್ಟಡಿ ಆಫ್ ಟೆರರಿಸಂ ಆ್ಯಂಡ್ ರೆಸ್ಪಾನ್ಸಸ್ ಟೂ ಟೆರರಿಸಂ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿತ್ತು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆ ಶೇಕಡ 24ರಷ್ಟು ಹೆಚ್ಚಿದೆ ಹಾಗೂ ಉಗ್ರರ ಉಪಟಳದಿಂದ ಹತರಾದವರ ಸಂಖ್ಯೆ ಶೇಕಡ 89ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಭಾರತದಲ್ಲಿ 2017ರಲ್ಲಿ ಒಟ್ಟು 860 ಭಯೋತ್ಪಾದಕ ಕೃತ್ಯಗಳು ನಡೆದಿದ್ದು, ಶೇಕಡ 25ರಷ್ಟು ಪ್ರಕರಣಗಳು ಜಮ್ಮು ಮತ್ತು ಕಾಶ್ಮೀರದಲ್ಲೇ ವರದಿಯಾಗಿವೆ.

ಆದರೆ ಭಾರತ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂದು ಭಾರತೀಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. "ಭಾರತದಲ್ಲಿ ನಡೆಯುವ ಬಹುತೇಕ ಉಗ್ರ ಕೃತ್ಯಗಳು ಪಾಕಿಸ್ತಾನಿ ನೆಲದ ಸಂಘಟನೆಗಳಿಂದ ಪ್ರಾಯೋಜಿತ ಮತ್ತು ಅಲ್ಲಿನ ಸೇನೆ ಅದಕ್ಕೆ ಅವಕಾಶ ನೀಡುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ, ದಶಕಗಳಿಂದ ಅದು ಪ್ರಾಯೋಜಿಸುತ್ತ ಬಂದ ಉಗ್ರಗಾಮಿ ಸಂಘಟನೆಗಳಿಂದಲೇ ಭೀತಿ ಎದುರಿಸುತ್ತಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ 2016ಕ್ಕೆ ಹೋಲಿಸಿದರೆ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ಶೇಕಡ 8ರಷ್ಟು ಇಳಿದಿವೆ. 2016ರಲ್ಲಿ 931 ಪ್ರಕರಣಗಳು ದಾಖಲಾಗಿದ್ದವು. ಮೊದಲೆರಡು ಸ್ಥಾನಗಳಲ್ಲಿರುವ ಇರಾಕ್ ಹಾಗೂ ಅಪ್ಘಾನಿಸ್ತಾನದಲ್ಲಿ ಕ್ರಮವಾಗಿ 1,951 ಹಾಗೂ 1,171 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News