ಏಶ್ಯಕಪ್: ಅನನ್ಯ ದಾಖಲೆ ನಿರ್ಮಿಸಿದ ಧವನ್

Update: 2018-09-22 07:26 GMT

 ದುಬೈ, ಸೆ.22: ಈಗ ಯುಎಇನಲ್ಲಿ ನಡೆಯುತ್ತಿರುವ ಏಶ್ಯಕಪ್ ಟೂರ್ನಮೆಂಟ್‌ನಲ್ಲಿ ಎಡಗೈ ದಾಂಡಿಗ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಧವನ್ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಏಕದಿನ ಇನಿಂಗ್ಸ್‌ವೊಂದರಲ್ಲಿ ನಾಲ್ಕು ಕ್ಯಾಚ್‌ಗಳನ್ನು ಪಡೆದು ಖ್ಯಾತನಾಮರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಧವನ್ ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ನಝ್ಮುಲ್ ಹುಸೇನ್, ಶಾಕಿಬ್ ಅಲ್ ಹಸನ್, ಮೆಹಿದಿ ಹಸನ್ ಹಾಗೂ ಮುಸ್ತಫಿಝುರ್ರಹ್ಮಾನ್ ನೀಡಿದ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಏಕದಿನದ ಇನಿಂಗ್ಸ್‌ವೊಂದರಲ್ಲಿ ನಾಲ್ಕು ಕ್ಯಾಚ್‌ಗಳನ್ನು ಪಡೆದ ಭಾರತದ ಏಳನೇ ದಾಂಡಿಗ ಎನಿಸಿಕೊಂಡರು.

ಸುನೀಲ್ ಗವಾಸ್ಕರ್(1985ರಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ), ಮುಹಮ್ಮದ್ ಅಝರುದ್ದೀನ್(1997ರಲ್ಲಿ ಪಾಕಿಸ್ತಾನ ವಿರುದ್ಧ ಟೊರಾಂಟೊದಲ್ಲಿ),ಸಚಿನ್ ತೆಂಡುಲ್ಕರ್(1998ರಲ್ಲಿ ಢಾಕಾದಲ್ಲಿ ಪಾಕಿಸ್ತಾನ ವಿರುದ್ಧ), ರಾಹುಲ್ ದ್ರಾವಿಡ್(1999ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟೊರಾಂಟೊದಲ್ಲಿ), ಮುಹಮ್ಮದ್ ಕೈಫ್(2003ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಶ್ರೀಲಂಕಾ ವಿರುದ್ಧ) ಹಾಗೂ 2004ರಲ್ಲಿ ಪರ್ತ್‌ನಲ್ಲಿ ಝಿಂಬಾಬ್ವೆ ವಿರುದ್ಧ ವಿವಿಎಸ್ ಲಕ್ಷ್ಮಣ್ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕದ ಜಾಂಟಿ ರೋಡ್ಸ್ ಏಕದಿನ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಶ್ವದ ಮೊದಲ ಆಟಗಾರ. ರೋಡ್ಸ್ 1993ರಲ್ಲಿ ಮುಂಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಪಂದ್ಯದಲ್ಲಿ 5 ಕ್ಯಾಚ್‌ಗಳನ್ನು ಪಡೆದಿದ್ದರು.

ಏಶ್ಯಕಪ್‌ನಲ್ಲಿ 96.38ರ ಸರಾಸರಿಯಲ್ಲಿ 3 ಪಂದ್ಯಗಳಲ್ಲಿ 213 ರನ್ ಗಳಿಸಿರುವ ಧವನ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಧವನ್ ಬಾಂಗ್ಲಾದೇಶ ವಿರುದ್ದ ಸೂಪರ್-4 ಪಂದ್ಯದಲ್ಲಿ 47 ಎಸೆತಗಳಲ್ಲಿ 40 ರನ್ ಗಳಿಸಿ ಭಾರತ 36.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News