ಅಫ್ಘಾನಿಸ್ತಾನ ಕ್ರಿಕೆಟಿಗರ ಫಿಟ್‌ನೆಸ್ ಕ್ರಾಂತಿಗೆ ಪ್ರೇರಣೆ ಭಾರತದ ಈ ಕ್ರಿಕೆಟಿಗ

Update: 2018-09-22 08:58 GMT

 ದುಬೈ, ಸೆ.22: ‘‘ವೃತ್ತಿಪರ ಆಟಗಾರರಾಗಿ ಮುಂದಿನ ಪಂದ್ಯಕ್ಕೆ ತಯಾರಾಗಬೇಕಾಗುತ್ತದೆ. ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಚೇತರಿಸಿಕೊಳ್ಳಲು 16 ಅಥವಾ 12 ಗಂಟೆಗಳ ಅಂತರವಿದ್ದರೂ ಆ ಬಗ್ಗೆ ಯೋಚಿಸಬಾರದು. ನಾವು ಕಳೆದ 5-6 ತಿಂಗಳುಗಳಲ್ಲಿ ನಮ್ಮ ಫಿಟ್‌ನೆಸ್ ವಿಷಯದಲ್ಲಿ ತುಂಬಾ ಸುಧಾರಣೆಯಾಗಿದ್ದೇವೆ’’ ಎಂದು ಬಾಂಗ್ಲಾದೇಶ ವಿರುದ್ಧ ಏಶ್ಯಕಪ್‌ನ ಕೊನೆಯ ಗ್ರೂಪ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಪಂದ್ಯಶ್ರೇಷ್ಠ ಪುರಸ್ಕೃತ ರಶೀದ್ ಖಾನ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಗುರುವಾರ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಿತ್ತು. ಮರುದಿನ ಶುಕ್ರವಾರ ಪಾಕಿಸ್ತಾನ ವಿರುದ್ಧ ಸೂಪರ್-4 ಪಂದ್ಯವನ್ನು ಆಡಿತ್ತು. ಬಾಂಗ್ಲಾ ವಿರುದ್ಧ ಜಯ ಸಾಧಿಸಿದ್ದ ಅಫ್ಘಾನ್ ತಂಡ ಪಾಕ್ ವಿರುದ್ಧ ವೀರೋಚಿತ ಸೋಲುಂಡಿತ್ತು. ಅಫ್ಘಾನಿಸ್ತಾನದ ಸಾಂಘಿಕ ಫಿಟ್‌ನೆಸ್ ಜಾಗೃತಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಪರೋಕ್ಷ ಪಾತ್ರವಹಿಸಿದ್ದಾರೆ. ಕೊಹ್ಲಿಯ ಫಿಟ್‌ನೆಸ್ ಫಿಲಾಸಫಿ ರಶೀದ್ ಮೂಲಕ ಅಫ್ಘಾನ್ ಆಟಗಾರರನ್ನು ತಲುಪಿದೆ.

 ಏಶ್ಯಕಪ್‌ಗಿಂತ ಮೊದಲು ಕಳೆದ 6 ತಿಂಗಳುಗಳಲ್ಲಿ ಅಪ್ಘಾನಿಸ್ತಾನ ಉತ್ತಮ ಪ್ರದರ್ಶನ ನೀಡಿದೆ. ಯುಎಇನಲ್ಲಿ ನಡೆದ ಏಕದಿನ ಸರಣಿಯಲ್ಲಿ ಝಿಂಬಾಬ್ವೆ ತಂಡವನ್ನು 4-1 ಅಂತರದಿಂದ ಮಣಿಸಿತ್ತು. ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್‌ನ್ನು ಮಣಿಸಿ ಹರಾರೆಯಲ್ಲಿ ಐಸಿಸಿ ವರ್ಲ್ಡ್‌ಕಪ್ ಕ್ವಾಲಿಫೈಯರ್‌ನಲ್ಲಿ ಗೆಲುವು ಸಾಧಿಸಿತ್ತು. ದ್ವಿಪಕ್ಷೀಯ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತ್ತು. ಭಾರತದ ಡೆಹ್ರಾಡೂನ್‌ನಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದಿಂದ ಗೆಲುವು ದಾಖಲಿಸಿತ್ತು.

‘‘ನಮ್ಮ ಫಿಜಿಯೋ(ಫಝಲ್ ಅಝೀಂ) ಹಾಗೂ ಸ್ಟ್ರೆಂತ್, ಕಂಡೀಶನಿಂಗ್ ಕೋಚ್(ಜೇಸನ್ ಡೌಗ್ಲಾಸ್)ತಂಡದ ಫಿಟ್‌ನೆಸ್‌ನಲ್ಲಿ ಕಠಿಣ ಶ್ರಮಪಡುತ್ತಿದ್ದಾರೆ. ಕಳೆದ 6 ತಿಂಗಳುಗಳಲ್ಲಿ ನಮ್ಮ ತಂಡದ ಫಿಟ್‌ನೆಸ್ ಸಾಕಷ್ಟು ಅಭಿವೃದ್ದಿಯಾಗಿದೆ. ರಶೀದ್ ಖಾನ್ ಅವರು ಕೊಹ್ಲಿಯ ಫಿಟ್‌ನೆಸ್ ಪ್ರಕ್ರಿಯೆಯನ್ನು ಹಿಂಬಾಲಿಸುತ್ತಿದ್ದಾರೆ. ಕೊಹ್ಲಿ ಓರ್ವ ಫಿಟ್ ಕ್ರಿಕೆಟಿಗ. ಇದನ್ನು ರಶೀದ್ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಲೆಗ್-ಸ್ಪಿನ್ನರ್ ರಶೀದ್ ಐಪಿಎಲ್ ಸಹಿತ ಇತರ ಫ್ರಾಂಚೈಸಿ ಮೂಲದ ಟ್ವೆಂಟಿ-20 ಲೀಗ್‌ಗಳಲ್ಲಿ ಆಡಿ ಬಹಳಷ್ಟು ಲಾಭ ಪಡೆದಿದ್ದಾರೆ’’ ಎಂದು ಅಫ್ಘಾನಿಸ್ತಾನ ಮ್ಯಾನೇಜರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News