3 ಸಾವಿರ ಪಿಂಚಣಿ ನೀಡಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

Update: 2018-09-22 12:39 GMT

ಬೆಂಗಳೂರು, ಸೆ.22: ಪ್ರತಿ ತಿಂಗಳಿಗೆ ಮೂರು ಸಾವಿರ ಪಿಂಚಣಿ ನೀಡುವಂತೆ ಆಗ್ರಹಿಸಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಶನಿವಾರ ನಗರದ ಸಿಟಿ ರೈಲ್ವೆ ನಿಲ್ದಾಣದ ಬಳಿಯಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ದೇಶದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಕೆಲಸ ಖಾಯಂಗೊಳಿಸದೆ ಕನಿಷ್ಠ ವೇತನ 18 ಸಾವಿರ ರೂ ಘೋಷಿಸದೆ ಅಂಗನವಾಡಿ ಸಂವಾದ ಕಾರ್ಯಕ್ರಮದಲ್ಲಿ ಕೇವಲ ಮಾತೆಯರ ಬಗ್ಗೆ ಭಾಷಣ ಮಾಡಿರುವುದು ಖಂಡನೀಯ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದರು.

ಕೇಂದ್ರ ಸರಕಾರವು ಅಧಿಕಾರಕ್ಕೆ ಬಂದು 5 ವರ್ಷ ಕಳೆದರು ಗೌರವಧನ ಹೆಚ್ಚಳ ಮಾಡಿಲ್ಲ. ಇದೀಗ ಚುನಾವಣೆಯ ನೆಪದಲ್ಲಿ ಕಾರ್ಯಕರ್ತೆಯರಿಗೆ ಅಲ್ಪಪ್ರಮಾಣದಲ್ಲಿ ವೇತನ ಏರಿಕೆ ಮಾಡಿರುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಕನಿಷ್ಠ ವೇತನ 18 ಸಾವಿರ ರೂ, ಇಎಸ್‌ಐ, ಪಿಎಫ್ ಗ್ರಾಚ್ಯುಯಿಟಿ ಕಾರ್ಮಿಕ ಕಾಯ್ದೆಗೆ ಒಳಪಡಿಸಿ ಖಾಯಂಗೊಳಿಸಬೇಕು. ನಿವೃತ್ತರಾದವರಿಗೆ ಮತ್ತು ಮುಂದೆ ನಿವೃತ್ತಿಯಾಗುವವರಿಗೆ ಕನಿಷ್ಠ ತಿಂಗಳಿಗೆ 3 ಸಾವಿರ ರೂ ನೀಡಬೇಕು. ಈ ಬಗ್ಗೆ ರಾಜ್ಯ ಸರಕಾರ ಕೂಡ ಗಮನಹರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ಅಂಗನವಾಡಿಗಳಲ್ಲಿ ಸುಮಾರು 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತಿಯಾಗಿರುವ ಸಾವಿರಾರು ಕಾರ್ಯಕರ್ತೆಯರು ಪಿಂಚಣಿ ಇಲ್ಲದೆ ಎರಡು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದಾರೆ. ಇವರ ನೆರವಿಗೆ ಬರಬೇಕಾದ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News