×
Ad

ಸೈದ್ಧಾಂತಿಕ ರಾಜಕಾರಣ ಮರೆಯಾಗುತ್ತಿದೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2018-09-22 19:35 IST

ಬೆಂಗಳೂರು, ಸೆ.22: ಇತ್ತೀಚಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ದೇಶದಲ್ಲಿ ಸೈದ್ಧಾಂತಿಕ ರಾಜಕಾರಣದ ಬದಲಿಗೆ, ಸಮಯ ಸಾಧಕ ರಾಜಕಾರಣ ಎದ್ದು ಕಾಣುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಕ್ಯಾಂಪೇನ್ ಫಾರ್ ಎಲೆಕ್ಟೋರಲ್ ರ್ಹಿಾರ್ಮ್ಸ್ ಇನ್ ಇಂಡಿಯಾ, ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಿದ್ದ ಪ್ರಮಾಣಾನುಗತ ಚುನಾವಣಾ ವ್ಯವಸ್ಥೆ-ಭಾರತಕ್ಕೆ ಪರ್ಯಾಯ ವ್ಯವಸ್ಥೆ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಾವಿಂದು ತಾಂತ್ರಿಕ ಪ್ರಜಾಪ್ರಭುತ್ವದಲ್ಲಿದ್ದು, ಸೈದ್ದಾಂತಿಕ, ತಾತ್ವಿಕ ಪ್ರಜಾಪ್ರಭುತ್ವ ಎಂಬುದು ಕಣ್ಮರೆಯಾಗಿದೆ. ಜೀವಿಸುವವರ ಪರವಾದ ಸ್ವಾತಂತ್ರ ಇರಬೇಕಾದರೆ ಸೈದ್ದಾಂತಿಕ ಚುನಾವಣೆ ವ್ಯವಸ್ಥೆ ಅತ್ಯಗತ್ಯ ಎಂದು ಅಭಿಪ್ರಾಯಿಸಿದರು.

ಈಗಿರುವ ಚುನಾವಣೆ ವ್ಯವಸ್ಥೆಯನ್ನು ಬದಲಾಯಿಸಿ ಹೊಸ ಚುನಾವಣೆ ಮಾಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಒಂದು ಕೆಟ್ಟ ಸರಕಾರ ಅಧಿಕಾರಕ್ಕೆ ಬಂದರೆ ಅದರಲ್ಲಿ ನಾವೂ ಪಾಲುದಾರರು. ಪ್ರಜಾಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದೇನೆ ಎಂದು ಬಹಿರಂಗವಾಗಿಯೇ ಹೇಳುತ್ತಾರೆ. ಅವರು ನೇರವಾಗಿ ಭ್ರಷ್ಟಾಚಾರ ಮಾಡುವುದು ಗೊತ್ತಿದ್ದರೂ ನಾವು ಸುಮ್ಮನಿದ್ದೇವೆ. ಅವರ ವಿರುದ್ಧ ಧ್ವನಿ ಎತ್ತಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ಅಪ ವ್ಯಾಖ್ಯಾನ ಮಾಡುವ ಮೂಲಕ ಜನತೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಭಿನ್ನಾಭಿಪ್ರಾಯ ಎಂಬ ಬಲಿಪೀಠವನ್ನು ನಿರ್ಮಾಣ ಮಾಡುವ ಮೂಲಕ ಗುಂಪು ಘರ್ಷಣೆಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಪ್ರಸಕ್ತ ಪ್ರಜಾಸತ್ತಾತ್ಮಕ ವ್ಯವಸ್ಥೆ ಅಡಿಯಲ್ಲಿ ಚುನಾವಣೆಯಲ್ಲಿ ಒಂದು ಜಾತಿ, ಧರ್ಮದ ಪಕ್ಷದ ನಾಯಕರಿಗೆ ಮತಹಾಕುವ ವ್ಯವಸ್ಥೆ ಗಟ್ಟಿಯಾಗಿದೆ. ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಜನಾಂದೋಲನ ರೂಪಗೊಳ್ಳಬೇಕು. ಇದರ ಮೂಲಕ ಸರಿಯಾದ ಚುನಾವಣಾ ವ್ಯವಸ್ಥೆ ರೂಪಗೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ದೇಶದಲ್ಲಿ ಜನಬೆಂಬಲ ಇರುವವರು ಅಧಿಕಾರಕ್ಕೆ ಬರುವುದಿಲ್ಲ. ಯಾರು ಹೆಚ್ಚು ಸ್ಥಾನ ಪಡೆಯುತ್ತಾರೋ ಅವರೇ ಅಧಿಕಾರಕ್ಕೆ ಬರುತ್ತಾರೆ. ಇದು ನಮ್ಮ ದುರ್ದೈವದ ಸಂಗತಿ. ರಾಜೀವ್ ಗಾಂಧಿ ಕಾಲದಲ್ಲಿ ಶೇ.49 ರಷ್ಟು ಬಹುಮತ ಪಡೆಯುವ ಮೂಲಕ ಅಧಿಕಾರ ಹಿಡಿದಿತ್ತು. ಅದಾದ ನಂತರ ಮತ್ತೆ ಯಾವ ಸರಕಾರವೂ ಅಷ್ಟು ಸ್ಪಷ್ಟವಾದ ಬಹುಮತ ಪಡೆದಿಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ನೀಡಲಾಗಿದೆ. ದೇಶದಲ್ಲಿ ಶೇ.16 ರಷ್ಟಿರುವ ಅಲ್ಪಸಂಖ್ಯಾತರಿಗೆ ಬರೀ 5.5 ರಷ್ಟು ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಪ್ರಾತಿನಿಧ್ಯ ಜನಸಂಖ್ಯೆವಾರು ಇರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಂ.ಸಿ.ರಾಜ್ ಅವರು ಬರೆದ ಚುನಾವಣೆ ವ್ಯವಸ್ಥೆಗಳು ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು. ಪ್ರೊ.ರವಿಂದ್ರನಾಥ್, ಕಾತ್ಯಾಯಿನಿ ಚಾಮರಾಜ್, ಜ್ಯೋತಿರಾಜ್ ಉಪಸ್ಥಿತರಿದ್ದರು.

ನಮ್ಮಲ್ಲಿ ಚುನಾವಣೆ ಎಂಬುದು ವಾಹನವಿದ್ದಂತೆ. ಅದನ್ನು ಚಲಿಸುತ್ತಿರುವವರು ಕೊನೆಗೆ ಜಖಂ ಆಗಿ ಹಾಸಿಗೆ ಹಿಡಿದಿದ್ದಾರೆ, ಮತ್ತಷ್ಟು ಜನ ಹಿಡಿಯಲಿದ್ದಾರೆ. ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನಾಗಬಾರದಿತ್ತೋ ಅದೇ ಆಗುತ್ತಿದೆ. ದೇಶದಲ್ಲಿ ವ್ಯವಸ್ಥಿತವಾಗಿ ದಲಿತರು, ಹಿಂದುಳಿದ, ಅಲ್ಪಸಂಖ್ಯಾತರನ್ನು ತುಳಿಯುತ್ತಿದ್ದಾರೆ. ಅದರ ಭಾಗವಾಗಿ ಭೂಮಿ ಕಸಿದುಕೊಳ್ಳುವುದು ಒಂದಾಗಿದೆ.

-ದೇವನೂರ ಮಹಾದೇವ, ಹಿರಿಯ ಸಾಹಿತಿ

ಪ್ರತಿಯೊಬ್ಬರಿಗೂ ರಾಜಕೀಯದಲ್ಲಿ ಬೆಳೆಯಬೇಕು. ಮುಂದುವರೆಯಬೇಕು ಎಂಬ ಆಸೆ ಇರುತ್ತದೆ. ಹಾಗಂತ ಎಲ್ಲರಿಗೂ ಪ್ರಾತಿನಿಧ್ಯ ಕೊಡಲು ಸಾಧ್ಯವಿಲ್ಲ. ಅವರ ಸೇವೆ, ಗಟ್ಟಿತನ, ಸಂಘಟನೆ ನೋಡಿಕೊಂಡು ಪಕ್ಷದಲ್ಲಿ ಸ್ಥಾನ ನೀಡಬೇಕಾಗುತ್ತದೆ. ಬದಲಾವಣೆಯಲ್ಲಿ ದೇಶದ ಭವಿಷ್ಯ ಅಡಗಿದೆ. ಇದು ಬೆಳವಣಿಗೆಗೆ ಪೂರಕವಾಗಿರುತ್ತದೆ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News