ಮೌಲಾನ ಝಕರಿಯಾ ವಾಲಾಜಾಹಿ ನಿಧನ

Update: 2018-09-22 14:07 GMT

ಬೆಂಗಳೂರು, ಸೆ.22: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಖ್ಯಾತ ಧಾರ್ಮಿಕ ವಿದ್ವಾಂಸ, ಮೌಲಾನ ಪಿ.ಎಂ.ಝಕರೀಯಾ ವಾಲಾಜಾಹಿ(85) ಶುಕ್ರವಾರ ಬೆಳಗ್ಗೆ ಶಿವಾಜಿನಗರದ ಬ್ರಾಡ್‌ವೇನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರ  ಜನಾಝ ನಮಾಝನ್ನು ಅಂದು ರಾತ್ರಿ 10 ಗಂಟೆಗೆ ನಗರದ ಖುದ್ದೂಸ್‌ ಸಾಹೇಬ್ ಈದ್ಗಾ ಮೈದಾನದಲ್ಲಿ ನೆರವೇರಿಸಲಾಯಿತು.

ಅವರ ಪುತ್ರ ಮೌಲಾನ ಮುಹಮ್ಮದ್ ಮುಝಮ್ಮಿಲ್ ರಶಾದಿ ಜನಾಝ ನಮಾಝನ್ನು ನೆರವೇರಿಸಿದರು. ಟ್ಯಾನರಿ ರಸ್ತೆಯಲ್ಲಿರುವ ಶಾವಲೀವಲ್ಲಾ ಮದ್ರಸಾ ಹಿಂಭಾಗದಲ್ಲಿರುವ ಖಬರಸ್ಥಾನ್‌ನಲ್ಲಿ ಇವರ ಪಾರ್ಥಿವ ಶರೀರವನ್ನು ದಫನ್ ಮಾಡಲಾಯಿತು. ಇವರ ನಿಧನದ ಸುದ್ದಿ ಹರಡುತ್ತಿದ್ದಂತೆ ಮಾಜಿ ಸಚಿವ ರೋಷನ್‌ಬೇಗ್, ಸಚಿವ ಝಮೀರ್‌ ಅಹ್ಮದ್‌ ಖಾನ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹ್ಮದ್, ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್ ಸೇರಿದಂತೆ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ಕಳೆದ 56 ವರ್ಷಗಳಿಂದ ಶಿವಾಜಿನಗರದ ಹರಿ ಮಸ್ಜಿದ್, ಕಲಾಸಿಪಾಳ್ಯದ ಮಸ್ಜಿದೆ ಖೂಬಾ, ಜಯನಗರ ನಾಲ್ಕನೆ ಹಂತದ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ಇಮಾಮ್ ಹಾಗೂ ಖತೀಬ್ ಆಗಿ ಝಕರೀಯಾ ಸಾಹೇಬ್ ಸೇವೆ ಸಲ್ಲಿಸಿದ್ದರು.

ಶ್ರದ್ಧಾಂಜಲಿ ಸಭೆ: ಮೌಲಾನ ಝಕರೀಯಾ ವಾಲಾಜಾಹಿ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ಶಾವಲೀವಲ್ಲಾ ಮದ್ರಸಾದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪರಿಮಿತ ಸೇವೆಯನ್ನು ಶ್ರದ್ಧಾಂಜಲಿ ಸಭೆಯಲ್ಲಿ ಸ್ಮರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News