ದಲಿತ ಮಹಿಳೆಗೆ ಜೀತ ಪದ್ಧತಿಯಡಿ ದೌರ್ಜನ್ಯ: ಆರೋಪಿಗಳ ಗಡಿಪಾರಿಗೆ ದಸಂಸ ಆಗ್ರಹ

Update: 2018-09-22 14:14 GMT

ಬೆಂಗಳೂರು, ಸೆ.22: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ವಾಸವಾಗಿರುವ ದಲಿತ ಮಹಿಳೆಯ ಮೇಲೆ ಜೀತಪದ್ಧತಿ ನೆಪದಲ್ಲಿ ದೌರ್ಜನ್ಯವೆಸಗಿ, ಅಪಹರಿಸಿದ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ದಸಂಸ ಆಗ್ರಹಿಸಿದೆ.

ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ದಲಿತ ಮಹಿಳೆಯ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳ ವಿರುದ್ಧ ಪೊರಕೆ ಪ್ರದರ್ಶಿಸುವುದರ ಮೂಲಕ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ದಸಂಸ ಮುಖಂಡ ಡಾ.ರಘು ಮಾತನಾಡಿ, ಸೆ.20 ರಂದು ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಕುದರಗುಂಡಿ ಗ್ರಾಮದ ನಾಗೇಶ್ ಮತ್ತು ಅವರ ಸಹಚರರು ದಲಿತ ಮಳೆಯ ಮೇಲೆ ದೌರ್ಜನ್ಯ ನಡೆಸಿ ಜೀತಕ್ಕಾಗಿ ಅಪಹರಣ ಮಾಡಿದ್ದಾರೆ. ರಾಜ್ಯ ಜೀತ ಮುಕ್ತವಾಗಿದೆ ಎಂದು ಸರಕಾರ, ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜೀತದ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.

ಆರೋಪಿಗಳು ದಲಿತ ಮಹಿಳೆಯನ್ನು ಪ್ರಾಣಿಯ ರೀತಿಯಲ್ಲಿ ಕಾರಿನಲ್ಲಿ ಅಪಹರಿಸಿದ್ದಾರೆ. ಈ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಎಚ್ಚೆತ್ತುಕೊಂಡಿಲ್ಲ. ಅಂದರೆ, ದಲಿತ ಸಮುದಾಯಕ್ಕೆ ಏನೇ ಸಮಸ್ಯೆ, ಸಂಕಷ್ಟವಾದರೂ ಯಾರೂ ಕೇಳುವುದಿಲ್ಲ, ಏನೂ ಆಗುವುದಿಲ್ಲ ಎಂಬುದು ಮುಂದುವರೆದಿದೆ ಎಂದು ಅವರು ವಿಷಾದಿಸಿದರು.

ಮಂಡ್ಯದ ಈ ಘಟನೆಗೆ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಸಡ್ಡೆಯ ಮನೋಭಾವವೇ ಕಾರಣ. ಇದು ಸರಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಆರೋಪಿಸಿದರು.

ಆರೋಪಿಗಳನ್ನು ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಹಾಗೂ ಜೀತ ನಿರ್ಮೂಲನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಹಾಗೂ ಇವರನ್ನು ಗಡಿಪಾರು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೆ, ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆಯನ್ನು ಜೀತ ಮುಕ್ತರನ್ನಾಗಿಸಿ ಸರಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News