ವಲಯವಾರು ಕೃಷಿ ನೀತಿ ಶೀಘ್ರದಲ್ಲೆ ಜಾರಿ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ

Update: 2018-09-22 14:18 GMT

ಬೆಂಗಳೂರು, ಸೆ. 22: ರಾಜ್ಯದಲ್ಲಿ ಕೃಷಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಲಯವಾರು ಕೃಷಿ ನೀತಿಯನ್ನು ಶೀಘ್ರದಲ್ಲೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ್ ರೆಡ್ಡಿ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಸುಜಲ ಯೋಜನೆ ಅಡಿ ಭೂ ಸಂಪನ್ಮೂಲ ಮಾಹಿತಿ ಪಾಲುದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದ ಅವರು, ಪ್ರದೇಶಕ್ಕೆ ಅನುಗುಣವಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಅರಿವು ಮೂಡಿಸುವ ಹಾಗೂ ನೀರಿನ ಸದ್ಬಳಕೆ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶದಿಂದ ಕೃಷಿಗೆ ಅಗತ್ಯವಿರುವ ಅಂಶಗಳನ್ನು ಒಳಗೊಂಡ ಕೃಷಿ ನೀತಿಯನ್ನು ಜಾರಿಗೆ ತರಲಾಗುವುದು ಎಂದರು.

ಕೃಷಿಗಾಗಿ ದುಡಿಯುತ್ತಿರುವ ಹಾಗೂ ರಾಜ್ಯದಲ್ಲಿ ನೆಲೆಸಿರುವ ಕೃಷಿ ಸಂಸ್ಥೆಗಳ ಸಂಶೋಧನೆಗಳನ್ನು ಸರಕಾರದ ಮಟ್ಟದಲ್ಲಿ ಅಧ್ಯಯನ ನಡೆಸಿ ಹಾಗೂ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಕೃಷಿಗೆ ಸಂಬಂಧಿಸಿದ ಅತ್ಯುತ್ತಮ ಯೋಜನೆಗಳನ್ನು ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜಲಾನಯನ ಅಭಿವೃದ್ಧಿ ಇಲಾಖೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಹಮ್ಮಿಕೊಂಡಿರುವ ರಾಜ್ಯದ ಜಲಾನಯನ ಅಭಿವೃದ್ಧಿ ಯೋಜನೆ-2013-14ನೆ ಸಾಲಿನಿಂದ 527ಕೋಟಿ ರೂ.ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಐದು ವರ್ಷಗಳ ಯೋಜನೆಯಡಿಯಲ್ಲಿ ಚಾಮರಾಜನಗರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬೀದರ್, ವಿಜಯಪುರ ಜಿಲ್ಲೆಗಳ ಆಯ್ದ 2531 ಕಿರು ಜಲಾನಯನ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆಯ ಯಶಸ್ಸಿನ ಆಧಾರದ ಮೇಲೆ ಭವಿಷ್ಯದಲ್ಲಿ ವಿಶ್ವಬ್ಯಾಂಕ್ ಸಹಾಯ ಮತ್ತೆ ಸಿಕ್ಕಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಕುರಿತು ರಾಜ್ಯ ಸರಕಾರ ಅತ್ಯಂತ ಉತ್ಸುಕವಾಗಿದೆ ಎಂದು ಶಿವಶಂಕರ್ ರೆಡ್ಡಿ ಇದೇ ವೇಳೆ ಹೇಳಿದರು.

ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್, ಕಾರ್ಯದರ್ಶಿ ಎಂ.ವೆಂಕಟೇಶ್ವರ ರಾವ್, ನಿರ್ದೇಶಕ ಬಿ.ವೈ.ಶ್ರೀನಿವಾಸ್, ಸುಜಲ ಯೋಜನೆಯ ನಿರ್ದೇಶಕರ ಪ್ರಭಾಸ್‌ಚಂದ್ರ ರೇ ಹಾಗೂ ಬಾಗಲಕೋಟೆ ಕೃಷಿ ವಿವಿ ಕುಲಪತಿ ಡಾ.ಕೆ.ಇಂದ್ರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News