ಬೆಂಗಳೂರು: ‘ಮಾದಕ ವಸ್ತು ಬೇಡ ಎನ್ನಿರಿ’ ಅಭಿಯಾನಕ್ಕೆ ಚಾಲನೆ

Update: 2018-09-22 14:20 GMT

ಬೆಂಗಳೂರು, ಸೆ.22: ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ನಗರ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವ ‘ಮಾದಕ ವಸ್ತುಗಳಿಗೆ ಬೇಡ ಎನ್ನಿರಿ’ ಅಭಿಯಾನಕ್ಕೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಚಾಲನೆ ನೀಡಿದರು.

ಶನಿವಾರ ನಗರದ ಪುರಭವನ ಮುಂಭಾಗ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರು ನಗರ ಪೊಲೀಸ್ ಸಹಯೋಗದೊಂದಿಗೆ ಮಾದಕ ವಸ್ತುಗಳಿಗೆ ಬೇಡ ಎನ್ನಿರಿ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕುರಿತು ಆಯುಕ್ತ ಸುನೀಲ್‌ಕುಮಾರ್ ಮಾತನಾಡಿ, ಮಾದಕ ವಸ್ತುಗಳು ನಮ್ಮ ಸಮಾಜ ಹಾಗೂ ನಮ್ಮವರ ಆರೋಗ್ಯವನ್ನು ಹಾಳು ಮಾಡುತ್ತದೆ. ಇವುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಮ್ಮವರಲ್ಲಿ ಹಾಗೂ ಮುಖ್ಯವಾಗಿ ಮಕ್ಕಳಲ್ಲಿ ಅರಿವು ಮೂಡಿಸುವುದು ಪ್ರಮುಖವಾಗಿದೆ ಎಂದರು.

ಒಂದೂವರೆ ತಿಂಗಳಿನಿಂದ ನಗರದ ಪೊಲೀಸರು ಮಾದಕ ವಸ್ತುಗಳ ವಿರುದ್ದ ಸಮರ ಸಾರಿದ್ದಾರೆ. ಈಗಾಗಲೇ ಬಹಳಷ್ಟು ಜಾಗೃತಿ ಕಾರ್ಯಕ್ರಮ ಏರ್ಪಡಿಸಿ, ಯಶಸ್ವಿಗೊಳಿಸಿದ್ದಾರೆ ಎಂದ ಅವರು, ನಿಮ್ಮ ನೆರೆಹೊರೆಯಲ್ಲಿ ಮಾದಕ ವಸ್ತುಗಳ ಮಾರಾಟ, ಉಪಯೋಗ ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತನ್ನಿ ಎಂದರು.

ಈ ಸಂದರ್ಭದಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸೀಮಂತ್‌ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ, ಲಯನ್ಸ್ ಕ್ಲಬ್‌ನ ಡಾ.ಉಮೇಶ್‌ಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News