ಕಾನೂನು ಸರಳೀಕರಣಕ್ಕೆ ಚಿಂತನೆ: ಸಚಿವ ಕೃಷ್ಣಭೈರೇಗೌಡ

Update: 2018-09-22 14:23 GMT

ಬೆಂಗಳೂರು, ಸೆ.22: ಕೆಲ ಕಾನೂನುಗಳನ್ನು ಸರಳೀಕರಣಗೊಳಿಸಬೇಕು ಎನ್ನುವ ಅಭಿಪ್ರಾಯ ಇದ್ದು, ಈ ಸಂಬಂಧ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಶನಿವಾರ ನಗರದ ಹೈಕೋರ್ಟ್ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳ ಚುನಾಯಿತ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜನ-ಸಾಮಾನ್ಯರಿಗೂ ಕಾನೂನು ಅರಿವು, ತಿಳಿವಳಿಕೆ ಬರಬೇಕು. ಈ ನಿಟ್ಟಿನಲ್ಲಿ ಹಲವು ಕಾನೂನು ಸರಳೀಕರಣ ಮಾಡಬೇಕು ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ನೀಡಲ್ಲ: ಕೇಂದ್ರ ಸರಕಾರ ಸೂಕ್ತ ಸಮಯಕ್ಕೆ ಅನುದಾನ ನೀಡದಿದ್ದರೂ, ರಾಜ್ಯ ಸರಕಾರವು ಯಾವುದೇ ರೀತಿಯಲ್ಲಿ ತಡೆ ಮಾಡದೆ, ರಾಜ್ಯ ವ್ಯಾಪ್ತಿಯ ನ್ಯಾಯಾಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಮುಂದೆಯೂ ಇದೇ ರೀತಿ, ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದೆಂದರು. ದೇಶದಲ್ಲಿಯೇ ಅತಿ ಉನ್ನತ ಕಾನೂನು ಶಾಲೆ ಕರ್ನಾಟಕದಲ್ಲಿದೆ. ಈ ಕಾಲೇಜಿನ ಆವರಣ ವ್ಯಾಪ್ತಿಯೊಳಗೆ ಶೀಘ್ರದಲ್ಲೇ ಸಭಾಂಗಣ ನಿರ್ಮಾಣ ಮಾಡಲಾಗುವುದು. ಅದೇ ರೀತಿ, ಇತರೆ ಕಾಲೇಜಿನ ಅಭಿವೃದ್ಧಿಗೂ ಬದ್ಧವಾಗಿದ್ದು, ಪ್ರತಿ ವರ್ಷ ಲೋಕೋಪಯೋಗಿ ಇಲಾಖೆಯಿಂದ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ರಂಗನಾಥ ಮಾತನಾಡಿ, ಕೆಲ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ವಕೀಲರು ಹೋದ ಸಂದರ್ಭದಲ್ಲಿ ಅಲ್ಲಿನ ಠಾಣಾಧಿಕಾರಿಗಳ ಆಸ್ತಿ ಕೇಳಿದಂತೆ ನಡೆದುಕೊಳ್ಳುತ್ತಾರೆ. ಹೀಗಾಗಿ, ಕೆಲ ಕಾನೂನು ಬದಲಾವಣೆ ಆಗಬೇಕು. ವಕೀಲರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್, ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳಿಮಠ, ರಾಜ್ಯ ಸರಕಾರದ ಅಡ್ವೋಕೆಟ್ ಜನರಲ್ ಉದಯ್ ಹೊಳ್ಳ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಪ್ರಮುಖರಿದ್ದರು.

‘ಕೇಂದ್ರ ನೀಡುವುದಿಲ್ಲ’

ಹಲವು ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು ಅನುದಾನವನ್ನೇ ನೀಡುವುದಿಲ್ಲ. ಆದರೂ, ರಾಜ್ಯ ಸರಕಾರ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸಲು ಬದ್ಧವಾಗಿದ್ದು, ಪ್ರಸ್ತುತ ಬಜೆಟ್‌ನಲ್ಲಿ ವಕೀಲಯ ಕಲ್ಯಾಣ ನಿಧಿಗೆ 5 ಕೋಟಿ ನೀಡಲಾಗಿದೆ.

-ಕೃಷ್ಣಭೈರೇಗೌಡ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News