ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶಕ್ಕೆ ಅನುಕೂಲವಾಗಿದೆ: ರಾಜೀವ್ ಚಂದ್ರಶೇಖರ್

Update: 2018-09-22 14:29 GMT

ಬೆಂಗಳೂರು, ಸೆ.22: ನೋಟು ಅಮಾನ್ಯೀಕರಣ, ಜಿಎಸ್‌ಟಿ ಹಾಗೂ ಪೆಟ್ರೋಲಿಯಂ ದರ ಏರಿಕೆಯಿಂದ ದೇಶಕ್ಕೆ ಅನುಕೂಲವೆ ಆಗಿದೆ. ಇದನ್ನು ಜನತೆಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರಕಾರದ ಸಾಧನೆಗಳ ಕುರಿತು ಆಯೋಜಿಸಿದ್ದ ಪರಾಮರ್ಶೆ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಗಳನ್ನು ವೈಫಲ್ಯ ಯೋಜನೆಗಳೆಂದು ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಜನತೆಯ ಬಳಿ ಸತ್ಯವನ್ನು ಕೊಂಡೊಯ್ಯಬೇಕಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಕಳೆದ ನಾಲ್ಕುವರೆ ವರ್ಷಗಳಿಂದ ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಆಳ್ವಿಕೆಯಲ್ಲಿ ದೇಶವು ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ವಿವಿಧ ಇಲಾಖೆಗಳಿದ್ದ ಭ್ರಷ್ಟಾಚಾರವನ್ನು ಮುಕ್ತಗೊಳಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಹಮ್ಮಿಕೊಂಡಿರುವ ಯೋಜನೆಗಳು ಸಾಕಾರಗೊಳ್ಳಬೇಕಿದ್ದರೆ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವಂತೆ ಶ್ರಮಿಸುವುದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೆ ಕಾರ್ಯಕರ್ತರು ತಳ ಮಟ್ಟದಲ್ಲಿ ಕೆಲಸ ಪ್ರಾರಂಭಿಸಬೇಕೆಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News