ಸಾಹಿತಿ- ಕಲಾವಿದರ ಮಾಸಾಶನ 2 ಸಾವಿರ ರೂ.ಗೆ ಹೆಚ್ಚಳಕ್ಕೆ ಚಿಂತನೆ

Update: 2018-09-22 14:31 GMT

ಬೆಂಗಳೂರು, ಸೆ.22: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಾಹಿತಿ ಹಾಗೂ ಕಲಾವಿದರಿಗೆ ನೀಡುವ ಮಾಸಾಶನ ಭತ್ತೆಯನ್ನು 1500ರೂ.ನಿಂದ 2 ಸಾವಿರ ರೂ.ಗೆ ಏರಿಸಲು ಚಿಂತನೆ ನಡೆಸಲಾಗಿದೆ.

ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿರುವ ಸಾಂಸ್ಕೃತಿಕ ನೀತಿಯಲ್ಲಿ ಸಾಹಿತಿ, ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು 2 ಸಾವಿರ ರೂ. ಗೆ ಏರಿಸಬೇಕು ಎಂದು ಸೂಚಿಸಿತ್ತು. ಇದರನ್ವಯ ಮಾಸಾಶನವನ್ನು ಹೆಚ್ಚಳ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ತಮ್ಮ ಜೀವನ ಮುಡುಪಾಗಿಡುವ ಸಾಹಿತಿ, ಕಲಾವಿದರು ವೃದ್ಧಾಪ್ಯದಲ್ಲಿ ಜೀವನ ನಡೆಸಲು ಸಾಕಷ್ಟು ತೊಂದರೆ ಅನುಭವಿಸುತ್ತಿರುವುದರಿಂದ 58 ವರ್ಷ ಮೀರಿದ ಸಾಹಿತಿ-ಕಲಾವಿದರಿಗೆ ಮಾಸಾಶನ ನೀಡುವ ಯೋಜನೆಗೆ ಜಾರಿಗೆ ತರಲಾಗಿದೆ. ಪ್ರಸ್ತುತ 13 ಸಾವಿರ ಮಂದಿ ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮಾಸಾಶನ 1500ರಿಂದ 2ಸಾವಿರ ರೂ.ಗೆ ಹೆಚ್ಚಿಸಿದರೆ ವಾರ್ಷಿಕ ವೆಚ್ಚ 20ರಿಂದ 25 ಕೋಟಿ ರೂ.ಗೆ ಏರಲಿದೆ. ಆದರೂ, ಇದರಿಂದ ನಾಡು-ನುಡಿಗೆ ಸೇವೆ ಸಲ್ಲಿಸಿದ ಹಿರಿಯರಿಗೆ ಅನುಕೂಲವಾಗುವುದರಿಂದ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿದೆ ಎಂದು ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

2018-19ನೆ ಸಾಲಿನಲ್ಲಿ ಹೊಸದಾಗಿ ಮಾಸಾಶನಕ್ಕೆ ಒಂದೂವರೆ ಸಾವಿರಕ್ಕಿಂತ ಹೆಚ್ಚಿನ ಅರ್ಜಿಗಳು ಬಂದಿವೆ. ಅವುಗಳನ್ನು ಜಿಲ್ಲಾ ಸಹಾಯಕ ನಿರ್ದೇಶಕರು ಪರಿಶೀಲಿಸಿ ಅಕಾಡೆಮಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅಕಾಡೆಮಿಯಿಂದ ಕಲಾವಿದರ ಸಂದರ್ಶನ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅರ್ಜಿಗಳನ್ನು ಕೇಂದ್ರ ಕಚೇರಿಗೆ ಪರಿಶೀಲಿಸಲು ಕಳುಹಿಸಲಾಗುತ್ತದೆ. ಕೇಂದ್ರ ಕಚೇರಿ ಮಾಸಾಶನ ನೀಡುವ ಸಮಿತಿಯಲ್ಲಿ ಅರ್ಜಿಗಳ ಕುರಿತು ಚರ್ಚಿಸಿ ಮಾಸಾಶನ ಮಂಜೂರು ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News