ದೇಶದಲ್ಲಿ ಹಸಿವಿನಿಂದ 56 ಜನರ ಸಾವು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2018-09-22 14:34 GMT

ಬೆಂಗಳೂರು, ಸೆ.22: 2015ರಿಂದ ದೇಶದಲ್ಲಿ 56 ಜನರು ಹಸಿವಿನಿಂದ ಸಾವಿಗೀಡಾಗಿದ್ದಾರೆ. ಇದು ಯಾವುದೇ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ. ಕೇಂದ್ರದ ಎನ್‌ಡಿಎ ಸರಕಾರದ ಜನ ವಿರೋಧಿ ಕ್ರಮವೇ ಇದಕ್ಕೆ ಮುಖ್ಯ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ನಾಗರಿಕ ಸಮಾಜದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂದು ಆಹಾರ ಭದ್ರತೆ ಹಾಗೂ ಪಡಿತರಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿತ್ತು ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಕೂಡ ಅನ್ನಭಾಗ್ಯ ಯೋಜನೆಯ ಮೂಲಕ ಬಡ ಜನರು ಹಸಿವಿನಿಂದ ಅಸುನೀಗದಂತೆ ಅವರಿಗೆ ಅಗತ್ಯ ಪಡಿತರ ವಿತರಿಸುತ್ತಿತ್ತು. ಆದರೆ, ಜನಪರ ಕಾಳಜಿ ಇಲ್ಲದ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದಲ್ಲಿ ಜನ ಹಸಿವಿನಿಂದ ಸಾಯುವಂತೆ ಮಾಡುತ್ತಿದೆ. ಇದು ನಿಜಕ್ಕೂ ಘೋರ ಅಪರಾಧ ಎಂದು ಅವರು ಕಿಡಿಗಾರಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಹಸಿವಿನಿಂದ ಸಾವಿಗೀಡಾಗಿರುವವರ ಪೈಕಿ ಅರ್ಧಕ್ಕೂ ಹೆಚ್ಚು ಜನ ಪಡಿತರ ಚೀಟಿಗಳಿಗೆ ಆಧಾರ ಸಂಖ್ಯೆ ಜೋಡಣೆ ಆಗದ ಕಾರಣ ಪಡಿತರ ದೊರಕದೆ ಸಾವಿಗೀಡಾಗಿದ್ದಾರೆ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಇದು ಮೋದಿ ಸರಕಾರದ ಕೆಟ್ಟ ಆಡಳಿತದ ಫಲವಾಗಿದೆ ಎಂದು ಈಶ್ವರ್ ಖಂಡ್ರೆ ದೂರಿದ್ದಾರೆ.

ರಾಜ್ಯದ ಗೋಕರ್ಣದಲ್ಲಿ 2017ರ ಜುಲೈನಲ್ಲಿ ದಲಿತ ಕುಟುಂಬದ ಮೂವರು ನಾಲ್ಕು ದಿನಗಳ ಅಂತರದಲ್ಲಿ ಹಸಿವಿನಿಂದ ಸಾವನ್ನಪ್ಪಿದ್ದಾರೆ. ಆಧಾರ್ ಸಂಖ್ಯೆ ಜೋಡನೆ ಮಾಡಿಲ್ಲ ಎಂಬ ಕಾರಣಕ್ಕೆ ಈ ಕುಟುಂಬದ ಪಡಿತರ ಚೀಟಿ ರದ್ದು ಮಾಡಲಾಗಿದೆ ಎಂದು ಅಧ್ಯಯನ ಹೇಳಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ಬಡ ಜನರ ತುತ್ತಿನ ಚೀಲಕ್ಕೆ ಕೈ ಹಾಕದೆ ಬಡವರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೀಗೆ ದಿನದಿಂದ ದಿನಕ್ಕೆ ಏರುತ್ತಿದ್ದರೆ ಬಡ ಜನರು ಅಗತ್ಯ ವಸ್ತುಗಳನ್ನು ಖರೀದಿಸದ ಸ್ಥಿತಿ ನಿರ್ಮಾಣವಾಗುತ್ತದೆ. ಈಗಲಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಬಡವರ ಕಷ್ಟ ನೀಗಿಸಬೇಕು ಎಂದು ಈಶ್ವರ್ ಖಂಡ್ರೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News