ರೌಡಿಶೀಟರ್ ಮಹಿಳೆಗೆ ಶ್ರೀರಾಮಸೇನೆ ಅಧ್ಯಕ್ಷೆಯ ಪಟ್ಟ!

Update: 2018-09-22 14:55 GMT

ಬೆಂಗಳೂರು, ಸೆ.22: ಜೀವ ಬೆದರಿಕೆ, ಬಡ್ಡಿ ದಂಧೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಯಶಸ್ವಿನಿಯನ್ನು ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಶನಿವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರೌಡಿಶೀಟರ್ ಯಶಸ್ವಿನಿ ಕೈಗೆ ಸಂಘದ ಧ್ವಜ ನೀಡಿ, ಅಧ್ಯಕ್ಷ ಸ್ಥಾನ ಹಸ್ತಾಂತರ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೌಡಿಗೆ ‘ಧರ್ಮ ರಕ್ಷಕಿ’ ಎಂದು ಬಿಂಬಿಸಲು ಹೊರಟಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿವೆ.

ಬಡ್ಡಿ ದಂಧೆಯ ರೌಡಿ: 2008ರಿಂದಲೇ ಗಂಭೀರ ಅಪರಾಧ ಚಟುವಟಿಕೆಗಳಲ್ಲ್ಲಿ ತೊಡಗಿದ್ದ 36 ವರ್ಷದ ಯಶಸ್ವಿನಿ ವಿರುದ್ಧ ಮೀಟರ್ ಬಡ್ಡಿ ದಂಧೆ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 2012ರಲ್ಲಿ ನಗರದ ಬಸವನಗುಡಿ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಬಳಿಕ ಆಕೆ ವಿರುದ್ದ ಶ್ರೀರಾಂಪುರ, ಹನುಮಂತನಗರ, ಪರಪ್ಪನ ಅಗ್ರಹಾರ, ತ್ಯಾಗರಾಜ ನಗರ, ಬಸವನಗುಡಿ, ಸುಬ್ರಹ್ಮಣ್ಯಪುರ, ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸುಮಾರು 8ಕ್ಕೂ ಹೆಚ್ಚು ದೂರು ದಾಖಲಾಗಿವೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.

ಹಿರಿಯ ಪೊಲೀಸ್ ಅಧಿಕಾರಿ ಸೋನಿಯಾ ನಾರಂಗ್ ಅವರು ದಕ್ಷಿಣ ವಿಭಾಗದಲ್ಲಿ ಡಿಸಿಪಿ ಆಗಿದ್ದ ವೇಳೆ ಆಕೆ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋದ ಯಶಸ್ವಿನಿ, ಪೊಲೀಸರು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ದೂರಿದ್ದಳು ಎನ್ನಲಾಗಿದೆ.

ಕಸ್ಟಡಿಯಿಂದ ಪರಾರಿ: ಬಡ್ಡಿ ಕೊಡಲಿಲ್ಲವೆಂಬ ಕಾರಣಕ್ಕೆ ಯಶಸ್ವಿನಿ 2016ರ ಮೇ 11ರಂದು ಕೊತ್ತನೂರು ಮುಖ್ಯರಸ್ತೆಯಲ್ಲಿರುವ ಪುಟ್ಟ ತಾಯಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ್ದಳು. ಆಗ ಆಕೆಯನ್ನು ವಶಕ್ಕೆ ಪಡೆದಿದ್ದ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು, ಎದೆನೋವು ಎಂದಿದ್ದಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯ ಕಿಟಕಿಯ ಗಾಜು ಒಡೆದು ಪರಾರಿಯಾಗಿದ್ದ ಯಶಸ್ವಿನಿ, ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಳು ಎನ್ನುವ ಆರೋಪ ಇದೆ.

ಕರ್ನಾಟಕ ಕ್ಯಾಪಿಟಲ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಸದಸ್ಯೆ ಉಷಾರಾಣಿ ಎಂಬವರಿಂದ 10 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಯಶಸ್ವಿನಿ ವಿರುದ್ಧ ಗಿರಿನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಯಿತು. ಹೀಗೆ, ಉಪಟಳ ಹೆಚ್ಚಾಗಿದ್ದರಿಂದ ಆಕೆಯ ಪತ್ತೆಗೆ ಬನಶಂಕರಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಸಾರ್ವಜನಿಕರಿಗೆ ವಂಚಿಸಿದ ಆರೋಪದಡಿ ಉಷಾರಾಣಿ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಯಿತು. ತಮ್ಮ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದಂತೆಯೇ ಉಷಾರಾಣಿ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಗೆ ಬೀಗ ಜಡಿದು ಪರಾರಿಯಾಗಿದ್ದರು. ಬಳಿಕ ಉಷಾರಾಣಿ ಅವರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಹಲ್ಲೆ ನಡೆಸಿದ ಗುಂಪಿನಲ್ಲಿ ರೌಡಿ ಯಶಸ್ವಿನಿ ಹಾಗೂ ಆಕೆಯ ಸಹಚರರು ಸಹ ಕಾಣಿಸಿಕೊಂಡಿದ್ದರು. ಆಗ ಯಶಸ್ವಿನಿ ವಿರುದ್ಧ ಉಷಾರಾಣಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಇನ್ನೊಂದು ದೂರು ದಾಖಲಿಸಿದ್ದರು. ಹೀಗೆ, ಈಕೆಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಇದೀಗ ಶ್ರೀರಾಮ ಸೇನೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಕೈ ಮೇಲೆ ಗನ್ ಟ್ಯಾಟೋ

ಬಡ್ಡಿ ದಂಧೆ ಆರೋಪ ಹೊತ್ತಿರುವ ರೌಡಿಶೀಟರ್ ಯಶಸ್ವಿನಿ ಬಲಗೈ ಮೇಲೆ ‘ಗನ್’ ಚಿತ್ರ ಇರುವ ಟ್ಯಾಟೋ ಹಾಕಿಸಿಕೊಂಡಿದ್ದು, ತಾನು ಅಪಾಯ ಎಂದು ಬರೆದುಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪತಿಯೂ ರೌಡಿ?

ಯಶಸ್ವಿನಿ ಪತಿ ಮಹೇಶ್ ಎಂಬಾತ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ ಎನ್ನಲಾಗಿದ್ದು, ಮೊದಲ ಪತಿಯ ಕೊಲೆಯಲ್ಲಿ ಯಶಸ್ವಿನಿ ವಿರುದ್ಧ ಆರೋಪ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News