ನ್ಯಾಯವಾದಿಗಳಿಗೂ ಗ್ರಾಮೀಣ ಸೇವೆ ಇರಲಿ: ನ್ಯಾ.ಅಬ್ದುಲ್ ನಝೀರ್

Update: 2018-09-22 14:59 GMT

ಬೆಂಗಳೂರು, ಸೆ. 22: ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾದರಿಯಲ್ಲಿಯೇ ನ್ಯಾಯವಾದಿಗಳಿಗೂ ಗ್ರಾಮೀಣ ಸೇವೆ ಇರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ಹೈಕೋರ್ಟ್ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳ ಚುನಾಯಿತ ಪದಾಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಸರಕಾರ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿದೆ. ಅದೇ ಮಾದರಿಯಲ್ಲಿ ವಕೀಲರು ಗ್ರಾಮೀಣ ಸೇವೆ ಕಡ್ಡಾಯವಾಗಿ ಮಾಡಬೇಕು. ಜೊತೆಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಕುರಿತ ಪ್ರಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ನಾವು ರಾಷ್ಟ್ರೀಯ ಕಾನೂನು ಶಾಲೆಗೆ ಅರ್ಜಿ ಹಾಕಿ ಸೀಟು ಪಡೆದುಕೊಂಡು ವಕೀಲರಾಗುತ್ತೇವೆ. ಆದರೆ, ಗ್ರಾಮೀಣ ಭಾಗದ ಜನರ ಸೇವೆ ಮುಂದಾಗಲು ಹಿಂದೇಟು ಹಾಕುತ್ತೇವೆ. ಅದೂ ಅಲ್ಲದೆ, ದೇಶದ ನ್ಯಾಯಾಲಯಗಳಲ್ಲಿ ಶೇ.90ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಿಂದ ಬರುತ್ತಿವೆ. ಹೀಗಾಗಿ, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ದೇಶದಲ್ಲಿ ನ್ಯಾಯವಾದಿಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ಪ್ರಜಾ ಪ್ರಭುತ್ವವನ್ನು ಉಳಿಸುವ ಕಾರ್ಯ ವಕೀಲರು ಮಾಡಬೇಕಾಗಿದೆ. ವಕೀಲರ ಸಂಘಗಳು ಗ್ರಾಮೀಣ ಭಾಗಗಳಿಂದ ನಗರಕ್ಕೆ ಬರುವ ವಕೀಲರು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಸಹಕಾರ ಮತ್ತು ಮಾರ್ಗದರ್ಶನ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಮಾತಿನಂತೆ. ಅದರಂತೆಯೇ, ಇಂದಿನ ಯುವ ವಕೀಲರೇ, ಮುಂದಿನ ನ್ಯಾಯಮೂರ್ತಿಗಳಾಗುತ್ತಾರೆ ಎಂದ ಅವರು, ನ್ಯಾಯಾಲಯ ಇರುವುದು ಜನರಿಗಾಗಿ ಹೊರತು, ಜನರು ನ್ಯಾಯಾಲಯಕ್ಕೆ ಅಲ್ಲ. ಸ್ಥಳೀಯ ಭಾಷೆಗಳನ್ನು ಉತ್ತೇಜನ ನೀಡಬೇಕು. ಜೊತೆ, ಹೊಸ ವಕೀಲರಿಗೆ ಉತ್ತಮ ಸಲಹೆ, ಮಾರ್ಗದರ್ಶನ ದೊರೆಯಬೇಕು ಎಂದು ಅಬ್ದುಲ್ ನಝೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News