​ವಿಧವೆಯನ್ನು ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ಗ್ರಾಮಸ್ಥರು

Update: 2018-09-23 03:48 GMT

ಗುವಾಹತಿ, ಸೆ. 23: ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಆಕೆಯ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ 'ಶಿಕ್ಷಿಸಿದ' ಆರೋಪದಲ್ಲಿ 19 ಮಂದಿ ಗ್ರಾಮಸ್ಥರನ್ನು ಬಂಧಿಸಲಾಗಿದೆ.

ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರುತ್ತಿದ್ದಳು ಎನ್ನುವುದು ಮಹಿಳೆಯ ಮೇಲಿದ್ದ ಆರೋಪ.

ಅಸ್ಸಾಂ- ಮಿಜೋರಾಂ ಗಡಿಭಾಗದ ಬುಡಕಟ್ಟು ಗ್ರಾಮದಲ್ಲಿ ಸೆ. 10ರಂದು ಈ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಮಹಿಳೆಯ ಮೇಲೆ ದಾಳಿ ಮಾಡಿದವರಲ್ಲಿ ಮಹಿಳೆಯರೂ ಸೇರಿರುವುದು ವೀಡಿಯೊ ದೃಶ್ಯಾವಳಿ ಪರಿಶೀಲನೆಯಿಂದ ತಿಳಿದುಬಂದಿದೆ.

ಸಂತ್ರಸ್ತ ಮಹಿಳೆ ಕರೀಂಗಂಜ್ ಮುಖ್ಯ ಜ್ಯುಡೀಶಿಯನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ನೀಡಿದ್ದರೂ, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. "ಆ ದಿನ ಮುಂಜಾನೆ ಬಾಗಿಲು ಮುರಿದು ನನ್ನ ಮನೆಗೆ ನುಗ್ಗಿ ವಿವಸ್ತ್ರಗೊಳಿಸಿ ಹೊಡೆದರು" ಎಂದು ದೂರು ನೀಡಲಾಗಿದೆ. ವಿಧವೆಯಾಗಿರುವ ಈಕೆ ಸಂಬಂಧಿಕರ ಜತೆ ವಾಸವಿದ್ದಾರೆ.

ಮಹಿಳೆ ಅಕ್ರಮವಾಗಿ ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದಳು ಹಾಗೂ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದ್ದಳು ಎಂದು ಗ್ರಾಮಸ್ಥರು ಆಪಾದಿಸಿದ್ದಾಗಿ ಕರೀಂಗಂಜ್ ಪೊಲೀಸ್ ಅಧೀಕ್ಷಕ ಗೌರವ್ ಉಪಾಧ್ಯಾಯ ಹೇಳಿದ್ದಾರೆ. ಆ ನಿರ್ದಿಷ್ಟ ದಾಳಿಗೆ ಏನು ಕಾರಣ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಆಡಳಿತದ ಈ ರಾಜ್ಯದಲ್ಲಿ ಗ್ರಾಮಸ್ಥರು ಕಾನೂನು ಕೈಗೆತ್ತಿಕೊಳ್ಳುತ್ತಿರುವ ಇಂಥ ಹಲವು ಘಟನೆಗಳು ಕಳೆದ ಕೆಲ ತಿಂಗಳುಗಳಲ್ಲಿ ವರದಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News