ಪಾಕಿಸ್ತಾನವು ಭಾರತದ ಸಾಂಪ್ರದಾಯಿಕ ವಿರೋಧಿಯೇ?

Update: 2018-09-23 18:39 GMT

ಮಾನ್ಯರೇ,

ನಮ್ಮ ನೆರೆಯ ದೇಶ ಪಾಕಿಸ್ತಾನವನ್ನು ಕ್ರೀಡೆ ಸೇರಿದಂತೆ ಹಲವು ವಿಷಯಗಳಲ್ಲಿ ಮಾಧ್ಯಮಗಳು ಸಾಂಪ್ರದಾಯಿಕ ವಿರೋಧಿ ಎಂದು ಬಣ್ಣಿಸುತ್ತವೆೆ. ಹಾಗೇ ನೈಜವಾಗಿ ಯಾವ ರೀತಿಯಲ್ಲಿ ಆ ದೇಶವು ಭಾರತದ ಸಾಂಪ್ರದಾಯಿಕ ವಿರೋಧಿ ಎಂದು ಹೇಳುತ್ತವೆಯೋ ಗೊತ್ತಿಲ್ಲ. ಸುಮಾರು ಮೂರುವರೆ ಶತಮಾನಗಳ ಕಾಲ ನಮ್ಮನ್ನು ಗುಲಾಮರಂತೆ ಕಂಡ ಬ್ರಿಟಿಷರು ಎಲ್ಲ ರೀತಿಯಿಂದಲೂ ನಮಗೆ ಸಾಂಪ್ರದಾಯಿಕ ವಿರೋಧಿ ಆಗಬೇಕಲ್ಲವೇ? ಹಾಗೆಯೇ ಪಾಕಿಸ್ತಾನಿಗರೂ ಬ್ರಿಟಿಷರ ಕ್ರೂರ ಶೋಷಣೆಯನ್ನು ಅನುಭವಿಸಿದವರೇ. ಹಾಗಾಗಿ ಈ ವಿಷಯದಲ್ಲಿ ಇಬ್ಬರೂ ಸಮಾನ ದುಃಖಿಗಳು. ನಮ್ಮ ದೇಶದಿಂದಲೇ ಸಿಡಿದು ಒಂದು ಪ್ರತ್ಯೇಕ ರಾಷ್ಟ್ರವಾಗಿರುವ ಪಾಕಿಸ್ತಾನ ನಮ್ಮ ದೇಶದ ಹಾಗೇ ವಿಭಿನ್ನ ಸಂಸ್ಕೃತಿ, ಸಾಮಾಜಿಕ, ಧಾರ್ಮಿಕ ನೆಲೆಗಟ್ಟನ್ನು ಹೊಂದಿರುವ ದೇಶ. ಕೇವಲ ಧರ್ಮದ ಕಾರಣಕ್ಕಾಗಿ ನಾವು ಪಾಕಿಸ್ತಾನವನ್ನು ಸಾಂಪ್ರದಾಯಿಕ ವಿರೋಧಿ ಎಂದು ಹೇಳಿದರೆ ಅಲ್ಲಿಗೆ ನಮ್ಮದು ಜಾತ್ಯತೀತ ದೇಶವಲ್ಲ ಎಂದೇ ಹೇಳಬೇಕಾಗುತ್ತದೆ. ‘ಸಾಂಪ್ರದಾಯಿಕ ವಿರೋಧಿ’ ಯಾರು ಹುಟ್ಟುಹಾಕಿದ ಪದವೋ ಗೊತ್ತಿಲ್ಲ. ಪ್ರಸ್ತುತ ಎಲ್ಲ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು ಅರಿವಿದ್ದೋ ಅರಿವಿರದೆಯೋ ಆ ಪದವನ್ನು ಸಾರಾಸಗಟಾಗಿ ಬಳಸುತ್ತವೆ. ಈ ಪದ ಬಳಕೆಯಿಂದ ಎರಡೂ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಹದಗೆಡಿಸಿಕೊಳ್ಳಬಹುದೇ ಹೊರತಾಗಿ ಬೆಸೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಪದಬಳಕೆಯಲ್ಲಿ ಮಾಧ್ಯಮಗಳು ಕೊಂಚ ಯೋಚಿಸುವುದು ಒಳಿತೆಂದು ತೋರುತ್ತದೆ.

Writer - ಬಸವರಾಜ ದಳವಾಯಿ, ಮುಗಳಿಹಾಳ

contributor

Editor - ಬಸವರಾಜ ದಳವಾಯಿ, ಮುಗಳಿಹಾಳ

contributor

Similar News