102ರ ಅಜ್ಜಿಗೆ ಇನ್ನೂ ಹಲವು ಪದಕಗಳನ್ನು ಗೆಲ್ಲುವ ಕನಸು

Update: 2018-09-23 18:50 GMT

ಹೊಸದಿಲ್ಲಿ, ಸೆ.23: ಹಿರಿಯ ಅಥ್ಲೀಟ್ ಮಾನ್ ಕೌರ್‌ಗೆ 102ಹರೆಯ. ಆದರೆ ಪದಕಗಳನ್ನು ಗೆಲ್ಲುವ ಹಸಿವು ನಿಂತಿಲ್ಲ. ಸ್ಪೇನ್‌ನಲ್ಲಿ ಇತ್ತೀಚೆಗೆ ನಡೆದ ವರ್ಲ್ಡ್‌ಮಾಸ್ಟರ್ಸ್‌ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಅವರು ಚಿನ್ನ ಜಯಿಸಿದ್ದಾರೆ.

 ಶತಾಯುಷಿ ಕೌರ್ ಅವರು ಇದೀಗ ಮುಂದಿನ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ.

‘‘ನಾನು ಇನ್ನೂ ಹಲವು ಪದಕಗಳನ್ನು ಪಡೆಯಲು ಬಯಸಿರುವೆ. ಪದಕ ಗೆದ್ದರೆ ನನಗೆ ಖುಷಿಯಾಗುತ್ತದೆ. ಸರಕಾರ ನನಗೆ ಏನ್ನು ಕೊಡದಿದ್ದರೂ, ನಾನು ಮಾತ್ರ ಸ್ಪರ್ಧೆಯಿಂದ ದೂರ ಸರಿಯಲಾರೆ. ಓಡುವುದನ್ನು ನಾನು ನಿಲ್ಲಿಸಲಾರೆ. ಇದು ನನಗೆ ಹೆಚ್ಚಿನ ಉತ್ಸಾಹವನ್ನು ತಂದು ಕೊಡುತ್ತದೆ’’ ಎಂದು ಕೌರ್ ಹೇಳಿದ್ದಾರೆ.

ಸ್ಪೇನ್‌ನ ಮಾಲಗದಲ್ಲಿ ಸೆಪ್ಟಂಬರ್ ಆರಂಭದಲ್ಲಿ ನಡೆದ 100ರಿಂದ 104 ವಯಸ್ಸಿನವರ ವರ್ಲ್ಡ್‌ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೌರ್ ಚಿನ್ನ ಜಯಿಸಿದ್ದರು. ಜಾವೆಲಿನ್ ಎಸೆತದಲ್ಲೂ ಕೌರ್ ಚಿನ್ನ ಬಾಚಿಕೊಂಡಿದ್ದರು.

  ಪೋಲೆಂಡ್‌ನಲ್ಲಿ ಮಾರ್ಚ್ 2019ರಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಕೌರ್ 60 ಮತ್ತು 200 ಮೀಟರ್ ಓಟದಲ್ಲಿ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.

ಕೌರ್ 93ರ ಹರೆಯದಲ್ಲಿ ಸ್ಪರ್ಧಾ ಕಣಕ್ಕೆ ಧುಮುಕಿದ್ದರು. ಕಳೆದ ವರ್ಷ ಅವರು ನ್ಯೂಝಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್‌ ಗೇಮ್ಸ್ ನ 100 ಮೀಟರ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದರು.

  ‘‘ಚೆನ್ನಾಗಿ ತಿನ್ನಬೇಕು. ವ್ಯಾಯಾಮ ಮಾಡಬೇಕು. ಆದರೆ ಜಂಕ್‌ಫುಡ್ ತಿನ್ನಬಾರದು. ಹಿರಿಯರನ್ನು ಗೌರವಿಸಬೇಕು ’’ ಎನ್ನುವುದು ಯುವ ಜನಾಂಗಕ್ಕೆ ಹಿರಿಯ ಅಜ್ಜಿಯ ಸಲಹೆ.

ಗೋಧಿಯಿಂದ ತಯಾರಿಸಿದ 6 ರೊಟ್ಟಿ. ಮೊಳಕೆಬರಿಸಿದ ಕಪ್ಪು ಕಡಲೆ, ಬಾರ್ಲಿ ಸೇವಿಸುತ್ತಾರೆ. ಸೋಯಾ ಮಿಲ್ಕ್, ಹಣ್ಣಿನ ರಸವನ್ನು ಕುಡಿಯುತ್ತಾರೆ. ಇದು ಅವರ ಫಿಟ್ನೆಸ್ ಹಿಂದಿರುವ ಗುಟ್ಟು. ಕೌರ್ ಅವರ 80ರ ಹರೆಯದ ಮಗ ಗುರುದೇವ್ ಸಿಂಗ್ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ತಾಯಿ ಮತ್ತು ಮಗನಿಗೆ ಹೊಸ ದಾಖಲೆಗಳನ್ನು ನಿರ್ಮಿಸುವ ಕನಸು. ಮುಂದಿನ ಮೂರು ವರ್ಷಗಳಲ್ಲಿ ಭಾಗವಹಿಸಲಿರುವ ಸ್ಪರ್ಧೆಗಳಿಗೆ ಅವರು ತಯಾರಿ ನಡೆಸುತ್ತಿದ್ದಾರೆ. ಮುಂದಿನ ವರ್ಷ ಪೊಲೆಂಡ್‌ನಲ್ಲಿ, 2020ರಲ್ಲಿ ಕೆನಡಾದಲ್ಲಿ ಮತ್ತು 2021ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ.

 ‘‘ನಾನು ವಿದೇಶಕ್ಕೆ ಹೋದಾಗ ಅಲ್ಲಿ 100ಕ್ಕಿಂತ ಹೆಚ್ಚಿನ ವಯಸ್ಸಿನವರು ಓಡುವುದನ್ನು ನೋಡಿದೆ. ಬಳಿಕ ತಾಯಿಗೆ ಈ ವಿಷಯ ತಿಳಿಸಿ ಅವರನ್ನು ಸ್ಪರ್ಧೆಗೆ ಇಳಿಯುವಂತೆ ಮಾಡಿದೆ. ಚಂಡೀಗಡದಲ್ಲಿ ರಾಷ್ಟ್ರೀಯ ಕ್ರೀಡಾಕೂಟದ 100 ಮತ್ತು 200 ಮೀಟರ್ ಓಟದಲ್ಲಿ ಅವರು ವಿಶ್ವ ದಾಖಲೆ ನಿರ್ಮಿಸಿದರು. ಬಳಿಕ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದರು’’ ಎಂದು ಮನಕೌರ್ ಮಗ ಗುರುದೇವ್ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News