ವಿಜಯ್ ಹಝಾರೆ ಟ್ರೋಫಿ: ವೇಗದ ಶತಕ ಸಿಡಿಸಿದ ಪೃಥ್ವಿ ಶಾ

Update: 2018-09-23 18:56 GMT

ಬೆಂಗಳೂರು, ಸೆ.23: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ರೈಲ್ವೇಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಆಟಗಾರ ಪೃಥ್ವಿ ಶಾ ವೇಗದ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಶತಕದ ಮೂಲಕ ಶಾ ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸ ಸರಣಿಗೆ ತಂಡದಲ್ಲಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎ ಕ್ಲಾಸ್ ಕ್ರಿಕೆಟ್‌ನಲ್ಲಿ ಶಾ ಈಗಾಗಲೇ ಭಾರತದ ಪರವಾಗಿ ಎರಡು ಶತಕಗಳನ್ನು ದಾಖಲಿಸಿದ್ದರೂ ಮುಂಬೈ ಪರ ಇದು ಅವರ ಮೊದಲ ಶತಕವಾಗಿದೆ. ಮುಂಬೈ ನಾಯಕ ಅಜಿಂಕ್ಯಾ ರಹಾನೆ ಮೂರು ರನ್ ಗಳಿಸಿ ಪೆವಿಲಿಯನ್ ಸೇರಿದರೂ ಶಾ ಮತ್ತೊಂದು ಕಡೆಯಿಂದ ತಮ್ಮ ಬಿರುಸಿನ ಆಟ ಮುಂದುವರಿಸಿದರು. ರೈಲ್ವೇಸ್ ಬೌಲರ್‌ಗಳ ಬೆವರಿಳಿಸಿದ ಶಾ ಕೇವಲ 61 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಸಿಡಿಸಿದ ಶಾ ಶ್ರೇಯಸ್ ಐಯ್ಯರ್ ಜೊತೆ 161 ರನ್‌ಗಳ ಜೊತೆಗಾರಿಕೆ ನೀಡಿದರು. ಶ್ರೇಯಸ್ ಅಯ್ಯರ್ ಕೂಡಾ ಅತ್ಯುತ್ತಮ ಆಟ ಪ್ರದರ್ಶಿಸುತ್ತಾ 118 ಎಸೆತಗಳಲ್ಲಿ 144 ಬಾರಿಸಿ ಎ ಕ್ಲಾಸ್ ಕ್ರಿಕೆಟ್‌ನಲ್ಲಿ 12ನೇ ಶತಕ ದಾಖಲಿಸಿದರು. ಪೃಥ್ವಿ ಶಾ ಅಂತಿಮವಾಗಿ 81 ಎಸೆತಗಳಲ್ಲಿ 129 ರನ್ ಗಳಿಸಿ ಪ್ರಶಾಂತ್ ಅವಸ್ಥಿಗೆ ವಿಕೆಟ್ ಒಪ್ಪಿಸಿದರು. ಶಾ ಮತ್ತು ಅಯ್ಯರ್ ಶತಕ, ಸೂರ್ಯಕುಮಾರ್ ಯಾದವ್‌ರ 67 ರನ್ ಮತ್ತು ಸಿದ್ದೇಶ್ ಲಾಡ್ 19 ಎಸೆತಗಳಲ್ಲಿ ಬಾರಿಸಿದ 30 ರನ್‌ನ ನೆರವಿನಿಂದ ಮುಂಬೈ 50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 400 ರನ್ ಗಳಿಸುವಲ್ಲಿ ಸಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News