ಮಧ್ಯಪ್ರದೇಶ: ಮೇಲ್ವರ್ಗ ವಿರುದ್ಧ ಸಂಘಟಿತ ಹೋರಾಟ

Update: 2018-09-24 04:26 GMT

ಭೋಪಾಲ್, ಸೆ.24: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದಲ್ಲಿ, ಜಾತಿಗಳ ನಡುವಿನ ಕಂದಕ ದೊಡ್ಡದಾಗುತ್ತಿದ್ದು, ರವಿವಾರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಮೇಲ್ವರ್ಗದವರ ವಿರುದ್ಧ ಬೃಹತ್ ಸಮಾವೇಶ ನಡೆಸಿದರು.

ಸಾಮನ್ಯ ಪಿಚ್ಡಾ ವರ್ಗ್ ಅಲ್ಪಸಂಖ್ಯಾಕ್ ಕಲ್ಯಾಣ್ ಸಮಾಜ್ (ಎಸ್‌ಎಪಿಎಕೆಎಸ್) ನೇತೃತ್ವಲ್ಲಿ ಈ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಮೇಲ್ವರ್ಗದವರು ನಡೆಸುತ್ತಿರುವ ಪ್ರತಿಭಟನೆಯು ಮೀಸಲಾತಿ ಅಂತ್ಯಗೊಳಿಸಲು ನಡೆಸಿರುವ ಹುನ್ನಾರ ಎಂದು ಈ ಸಮುದಾಯಗಳ ಮುಖಂಡರು ಕಿಡಿ ಕಾರಿದರು. ಎಸ್‌ಎಪಿಕೆಎಸ್ ಈಗಾಗಲೇ ಚುನಾವಣಾ ಚಿಹ್ನೆಗಾಗಿ ಆಯೋಗಕ್ಕೆ ಮನವಿ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ 230 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಘೋಷಿಸಲಾಯಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಸಂಯುಕ್ತ ವೇದಿಕೆಯಾದ ಪಿಚ್ಡಾ ವರ್ಗ್ ಅನುಸೂಚಿತ್ ಜಾತಿ ಜನಜಾಗೃತಿ ಸಂಯುಕ್ತ ಮೋರ್ಚಾ ವತಿಯಿಂದ ಬಿಎಚ್‌ಇಎಲ್ ದಸರಾ ಮೈದಾನದಲ್ಲಿ ಒಂದು ದಿನದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಎಸ್ಸಿ/ಎಸ್ಟಿ ದೌರ್ಜನ್ಯ ತಡೆಗೆ ಯಾವುದೇ ತಿದ್ದುಪಡಿ ತಾರದಂತೆ ಸರ್ಕಾರವನ್ನು ಆಗ್ರಹಿಸಲಾಯಿತು. ಮೇಲ್ವರ್ಗದವರು ನಡೆಸುತ್ತಿರುವ ಪ್ರತಿಭಟನೆ ಸಂವಿಧಾನಬಾಹಿರ. ಸಂವಿಧಾನಾತ್ಮಕ ಅಂಶಗಳ ಮೂಲಕ ಸೌಲಭ್ಯ ವಂಚಿತ ಸಮುದಾಯಗಳ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಮುಖಂಡರು ಪ್ರತಿಪಾದಿಸಿದರು. ಜತೆಗೆ ಮೇಲ್ವರ್ಗದ ಅಭ್ಯರ್ಥಿಗಳನ್ನು ಮುಂದಿನ ಚುನಾವಣೆಯಲ್ಲಿ ಬಹಿಷ್ಕರಿಸುವ ಎಚ್ಚರಿಕೆ ಸಂದೇಶವನ್ನೂ ಸರ್ಕಾರಕ್ಕೆ ರವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News