‘ದಲಿತ’ ಶಬ್ದವನ್ನು ಬಳಸಬಾರದು, ಆದರೆ ಇತರ ಜಾತಿ ಸೂಚಕ ಹೆಸರುಗಳನ್ನು ಬಳಸಬಹುದೇ?

Update: 2018-09-24 18:38 GMT

ಪಲ್ಲಾರ್‌ಗಳು, ಪರಯ್ಯಗಳು, ಸಕ್ಕಿಲ್ಲಾಯರುಗಳು ಮತ್ತು ದಾಸ, ಚಂಡಾಲ, ಅಸ್ಪೃಶ್ಯ, ಹರಿಜನ, ರಾಕ್ಷಸ, ಅಸುರ, ಅವರ್ಣ ಪಂಚಮದ ಜಾತಿ ಸೂಚಕ ಶಬ್ದಗಳನ್ನು ಬಳಸಿ ಹಿಂದೂ ಸವರ್ಣೀಯರು ದಲಿತರನ್ನು ಅವಮಾನಿಸಿದ್ದಾರೆ. ‘ದಲಿತ’ ಎಂಬುದು ಜಾತಿ ರಹಿತವಾದ ಒಂದು ಶಬ್ದ. ಇದರಲ್ಲಿ ಯಾವುದೇ ಅವಮಾನದ ಸೂಚನೆ ಇಲ್ಲ. ಸರಕಾರ, ಹೈಕೋರ್ಟ್ ಮತ್ತು ಕೆಲವು ಚಳವಳಿಗಳು ಇದೆ ಎಂದು ಹೇಳುವ ಅವಮಾನದ ಹೊರೆ ‘ದಲಿತ’ ಶಬ್ದಕ್ಕಿಲ್ಲ.


ಭಾಗ-1

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ‘ದಲಿತ’ ಶಬ್ದವನ್ನು ಬಳಸದಂತೆ ಮಾಧ್ಯಮಗಳಿಗೆ ಸೂಚಿಸಿದ ಬಳಿಕ ಬಹಳಷ್ಟು ಜನ ಆ ಶಬ್ದದ ಮೂಲ ಅರ್ಥವೇನೆಂದು ತಿಳಿಯಲು ಅಂತರ್ಜಾಲದ ಮೊರೆ ಹೋಗಿದ್ದಾರೆ. ಆದರೆ ನಮಗೀಗ ನಿಜವಾಗಿ ಬೇಕಾಗಿರುವುದು ಇತಿಹಾಸ ಮತ್ತು ಸಮಾಜದ ಸರಿಯಾದ ತಿಳಿವಳಿಕೆ.

ಮಹಾರಾಷ್ಟ್ರ ಮೂಲದ ಓರ್ವ ಸಾಮಾಜಿಕ ಕಾರ್ಯಕರ್ತ ಪಂಕಜ್ ಮೆಶ್ರಮ್‌ರವರ ಪ್ರಕಾರ, ದಲಿತ ಪದಕ್ಕೆ ಸಾಂವಿಧಾನಿಕ ಬದ್ಧತೆ ಇಲ್ಲ; ಆ ಶಬ್ದ ‘‘ಅವಮಾನಕಾರಿ ಮತ್ತು ದಲಿತ ಸಮುದಾಯವು ಘನತೆಗಾಗಿ ಕೈಗೊಂಡ ಪ್ರಯಾಣವನ್ನು ಯಾವ ಅರ್ಥದಿಂದಲೂ ವ್ಯಾಖ್ಯಾನಿಸುವುದಿಲ್ಲ’’ವಾದ ಕಾರಣ ಆ ಶಬ್ದದ ಮೇಲೆ ನಿಷೇಧ ಹೇರಬೇಕೆಂದು ವಿನಂತಿಸಿ ಅವರು ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇದರ ಬೆನ್ನಿಗೇ ಆ ಶಬ್ದವನ್ನು ಬಳಸದಂತೆ ಭಾರತೀಯ ಪತ್ರಿಕಾ ಮಂಡಳಿಯ ಮೂಲಕ ಸಲಹೆ ರೂಪದ ಒಂದು ಸೂಚನೆ ನೀಡುವಂತೆ ನ್ಯಾಯಾಲಯವು ಕೇಂದ್ರ ಸರಕಾರವನ್ನು ಕೇಳಿಕೊಂಡಿತು. ನ್ಯಾಯಾಲಯವಾಗಲಿ ಅಥವಾ ಸರಕಾರವಾಗಲಿ ದಲಿತ ಶಬ್ದ ನಿಜವಾಗಿಯೂ ‘‘ಅವಮಾನಕಾರಿಯೇ?; ಅವಹೇಳನಕಾರಿಯೇ?’’ ಎಂದು ಪರಿಶೀಲಿಸುವ ಪ್ರಯತ್ನ ಮಾಡಿಲ್ಲ.

ಈ ಹಿಂದೆ 2007ರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಆಯೋಗವು ಸರಕಾರಿ ದಾಖಲೆಗಳಲ್ಲಿ ದಲಿತ ಶಬ್ದವನ್ನು ಬಳಸದಂತೆ ರಾಜ್ಯ ಸರಕಾರಗಳನ್ನು ಕೇಳಿಕೊಂಡಿತ್ತು. ಆದರೆ ರಾಜ್ಯ ಸರಕಾರ ಸರಕಾರಿ ದಾಖಲೆಗಳಲ್ಲಿ ಏಕರೂಪದ ಅಥವಾ ಅಧಿಕೃತ ಹೆಸರನ್ನು ಬಳಸುವಂತೆ ಒತ್ತಾಯಿಸುವುದು ಬೇರೆ; ಕೇಂದ್ರ ಸರಕಾರ ದಲಿತ ಪದವನ್ನು ಸಾರ್ವಜನಿಕ ಸಂವಾದದಿಂದಲೇ ಗಡಿಪಾರು ಮಾಡುವುದು ಬೇರೆ. ‘ದಲಿತ ಗೌರವವನ್ನು ಎತ್ತಿ ಹಿಡಿಯುವಲ್ಲಿ’ ಸರಕಾರ ತೋರಿರುವ ಈ ಅತಿಯಾದ ಆಸಕ್ತಿಯನ್ನು ಈ ಹಿಂದೆ ಎಂದೂ ಅದು ತೋರಿರಲಿಲ್ಲ. ಅಷ್ಟೇ ಅಲ್ಲ; ಈ ಆಸಕ್ತಿ ಸಾಚಾ ಅಲ್ಲ.

 ನಿಜ ಹೇಳಬೇಕೆಂದರೆ, ಅರ್ಜಿದಾರನಿಗಾಗಲಿ ನ್ಯಾಯಾಲಯಕ್ಕಾಗಲಿ ಅಥವಾ ಸರಕಾರಕ್ಕಾಗಲಿ ಯಾರಿಗೂ ದಮನಿತ ಸಮುದಾಯಗಳ ಮೇಲೆ ಒಂದು ಅಸ್ಮಿತೆಯನ್ನು ಬಲಾತ್ಕಾರವಾಗಿ ಹೇರುವ ಹಕ್ಕಿಲ್ಲ. ಸಮುದಾಯವು ತನ್ನ ಅಸ್ಮಿತೆಯನ್ನು ತಾನಾಗಿಯೇ ಕಂಡುಕೊಳ್ಳುತ್ತದೆ. ಆದ್ದರಿಂದಲೇ ದಲಿತ ಪದವನ್ನು ಇನ್ನೂರು ವರ್ಷಗಳ ಹಿಂದೆಯೇ ಬಳಕೆಗೆ ತರಲಾಗಿತ್ತು ಮತ್ತು ಫುಲೆ ಮತ್ತು ಅಂಬೇಡ್ಕರ್ ಹಾಗೂ ಇನ್ನೂ ಹಲವರು ದಲಿತ ಪದವನ್ನು ಬಳಸಿದರು. ಆ ಪದ ಈಗ ಒಂದು ಪ್ರಮುಖ ರಾಜಕೀಯ ಸಂಕೇತವಾಗಿದೆ.

ಇತರ ಹೆಸರುಗಳು ಅವಮಾನಿಸುವಾಗ ಸಬಲಗೊಳಿಸುವ ಒಂದು ಹೆಸರು
ದಲಿತ ಶಬ್ದದ ನೇರವಾದ ಅರ್ಥ ‘ಒಡೆದ’ ಅಥವಾ ‘ಮರ್ಧಿಸಲ್ಪಟ್ಟ’, ‘ಸೋಲಿಸಲ್ಪಟ್ಟ’ ಎಂದಿರಬಹುದು. ಆದರೆ ಅದನ್ನು ಬಳಸುತ್ತಿರುವ ದಮನಿತ ಸಮುದಾಯಕ್ಕೆ ಅದು ಈಗ ಸಬಲೀಕರಣದ ಒಂದು ಶಬ್ದವಾಗಿದೆ ಎಂಬ ಮುಖ್ಯ ಕಾರಣಕ್ಕಾಗಿಯೇ ಅದನ್ನು, ಅದರ ಬಳಕೆಯನ್ನು ವಿರೋಧಿಸಲಾಗುತ್ತಿದೆ.

ಭಾರತದ ಸಂವಿಧಾನದ ಕರಡನ್ನು ಬರೆಯುವಾಗ ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡುವುದಕ್ಕಾಗಿ ದಲಿತರನ್ನು ಒಂದು ಪ್ರತ್ಯೇಕ ಯಾದಿಯಲ್ಲಿ ಸೇರಿಸಿದರು. ಅವರು ‘ಪರಿಶಿಷ್ಟ’ (ಶೆಡ್ಯೂಲ್ಡ್)ಎಂಬ ಪದವನ್ನು ಬಳಸಿದರು. ಬ್ರಿಟಿಷರು ಅದಾಗಲೇ ‘ಡಿಪ್ರೆಸ್ಡ್ ಕ್ಲಾಸಸ್’ ಮತ್ತು ‘ಶೆಡ್ಯೂಲ್ಡ್ ಕಾಸ್ಟ್ಸ್’ ಎಂಬ ಪದಗಳನ್ನು ಬಳಸಿದ್ದರಿಂದ ಈ ಶಬ್ದ (ಶೆಡ್ಯೂಲ್ಡ್) ರಾಜಕೀಯವಾಗಿ ಪರಿಚಿತ ಶಬ್ದವಾಗಿತ್ತು.

ಮೀಸಲಾತಿಯ ಪರಿಣಾಮವಾಗಿ ದಮನಿತ ಸಮುದಾಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಾಗ, ಅವರು ನೇರವಾದ ಜಾತಿ ಅವಮಾನಗಳಿಂದ ತಪ್ಪಿಸಿಕೊಂಡರು. ಆದರೆ ‘ಎಸ್ಸಿ’ ಎಂಬ ಪದ ಸವರ್ಣೀಯ ಹಿಂದೂಗಳಿಗೆ ಜಾತಿಯ ನೆಲೆಯಲ್ಲಿ ದಲಿತರನ್ನು ಅವಮಾನಿಸಲು ದೊರಕಿದ ಒಂದು ಪದವಾಯಿತು; ಬಳಕೆಯಲ್ಲಿ ಅದು ಒಂದು ಅವಹೇಳನಕಾರಿ ಶಬ್ದವಾಯಿತು. ಸಂವಿಧಾನದಲ್ಲಿ ಒಂದು ಆಡಳಿತಾತ್ಮಕ ಪದವಾಗಿ ಈ ಶಬ್ದ ಇರುವುದರಿಂದ ಆಡಳಿತಾತ್ಮಕ ಉದ್ದೇಶಗಳಿಗಾಗಿ ಈ ಶಬ್ದವನ್ನು ಬಳಸುವುದಕ್ಕೆ ಒಂದು ಕಾರಣ ಇದೆ; ಒಂದು ತರ್ಕ ಇದೆ. ಆದರೆ ಎಸ್ಸಿ ಎಂಬ ಪದವನ್ನು ಬಳಸುವಂತೆ ಮಾಧ್ಯಮಗಳನ್ನು ಬಲಾತ್ಕರಿಸುವುದರ ಹಿಂದೆ ದುರುದ್ದೇಶವಿದೆ. ಈಗಾಗಲೇ ಮಿಳಿತವಾಗಿರುವ ಒಂದು ಸಮುದಾಯದ ದಮನವನ್ನು ಶಾಶ್ವತವಾಗಿ ಮುಂದುವರಿಸುವುದೇ ಆ ದುರುದ್ದೇಶ.

ಪಲ್ಲಾರ್‌ಗಳು, ಪರಯ್ಯಗಳು, ಸಕ್ಕಿಲ್ಲಾಯರುಗಳು ಮತ್ತು ದಾಸ, ಚಂಡಾಲ, ಅಸ್ಪೃಶ್ಯ, ಹರಿಜನ, ರಾಕ್ಷಸ, ಅಸುರ, ಅವರ್ಣ ಪಂಚಮದ ಜಾತಿ ಸೂಚಕ ಶಬ್ದಗಳನ್ನು ಬಳಸಿ ಹಿಂದೂ ಸವರ್ಣೀಯರು ದಲಿತರನ್ನು ಅವಮಾನಿಸಿದ್ದಾರೆ. ‘ದಲಿತ’ ಎಂಬುದು ಜಾತಿ ರಹಿತವಾದ ಒಂದು ಶಬ್ದ. ಇದರಲ್ಲಿ ಯಾವುದೇ ಅವಮಾನದ ಸೂಚನೆ ಇಲ್ಲ. ಸರಕಾರ, ಹೈಕೋರ್ಟ್ ಮತ್ತು ಕೆಲವು ಚಳವಳಿಗಳು ಇದೆ ಎಂದು ಹೇಳುವ ಅವಮಾನದ ಹೊರೆ ‘ದಲಿತ’ ಶಬ್ದಕ್ಕಿಲ್ಲ.

ಅಂಬೇಡ್ಕರ್ ಗಾಂಧಿಗೆ ಹೇಳಿದ್ದೇನು?
ಗಾಂಧೀಜಿ ಅಸ್ಪೃಶ್ಯರಿಗೆ ‘ಹರಿಜನ’ ಎಂಬ ಹೆಸರು ನೀಡಿದಾಗ ಅಂಬೇಡ್ಕರ್ ಅದನ್ನು ಬಲವಾಗಿ ವಿರೋಧಿಸಿದರು. ಈ ‘ಹೊಸ ಹೆಸರು’ ಅಸ್ಪೃಶ್ಯರಿಗೆ ಮಾಡುವ ಮೋಸಕ್ಕೆ ಸಮಾನ ಮತ್ತು ಹಿಂದೂಗಳಿಗೆ ತಮ್ಮ ಪಾಪದಿಂದ ಸುಳ್ಳು ವಿಮೋಚನೆ ನೀಡುವ ಶಬ್ದ ಎಂದರು. ಅವರಿಗೆ ವಾಸ್ತವವನ್ನು ಪ್ರತಿಫಲಿಸುವ ಶಬ್ದ, ಅದು ಕಹಿಯಾಗಿದ್ದರೂ ಕೂಡ ಸುಳ್ಳು ಸಿಹಿ ಶಬ್ದ (ಹರಿಜನ)ಕ್ಕಿಂತ ಮೇಲು. 1991ರಲ್ಲಿ ನಡೆದ ಅಂಬೇಡ್ಕರ್ ಶತಮಾನೋತ್ಸವದ ಬಳಿಕ ‘ದಲಿತ’ ಶಬ್ದ ತುಂಬಾ ಜನಪ್ರಿಯವಾಯಿತು. ‘ದಲಿತ್ ಪ್ಯಾಂಥರ್ಸ್’ನಂತಹ ಸಂಘಟನೆಗಳು ಅದಾಗಲೇ ಮುನ್ನೆಲೆಗೆ ಬಂದಿದ್ದವು. ಚಳವಳಿಗಳು, ಸಾಹಿತ್ಯಕ ಮತ್ತು ಸಾಮಾಜಿಕ ರಾಜಕೀಯ ಹೋರಾಟಗಳು ದಲಿತ ಶಬ್ದದ ಜೋಡಣೆಯೊಂದಿಗೆ ಅದೇ ಅವಧಿಯಲ್ಲಿ ಮುಂಚೂಣಿಗೆ ಬಂದವು. ಲೇಖಕರಿಗೆ ಪ್ರಾಧ್ಯಾಪಕರಿಗೆ ಮತ್ತು ರಾಜಕಾರಣಿಗಳಿಗೆ ‘ದಲಿತ’ ಎಂಬ ಶಬ್ದ ವಿಮೋಚನೆಯ ಒಂದು ಶಬ್ದವಾಯಿತು. ದೇಶಾದ್ಯಂತ ಇರುವ 1,300 ದಮನಿತ ಸಮುದಾಯಗಳಿಗೆ ದಲಿತ ಪದ ರಾಜಕೀಯವಾಗಿ ಒಂದು ಕೊಂಡಿಯಾಯಿತು; ಸಂಪರ್ಕ ಸೇತುವೆಯಾಯಿತು ಮತ್ತು ಅಂತರ್‌ರಾಷ್ಟ್ರೀಯ ಮಾನವ ಹಕ್ಕು ವೇದಿಕೆಗಳಲ್ಲಿ ಎಲ್ಲರ ಗಮನ ಸೆಳೆಯಿತು.

ದಮನಿತ ಸಮುದಾಯವೊಂದರ ರಾಜಕೀಯ ಜಾಗೃತಿಗೆ, ಎಚ್ಚರಕ್ಕೆ ಸಂವಾದಿಯಾಗಿ ಈಗ ಗುರುತಿಸಲ್ಪಟ್ಟಿರುವ ಒಂದು ಶಬ್ದವನ್ನು ನಿಷೇಧಿಸುವುದೇ ಜಾತಿ ತುಳಿತಕ್ಕೆ, ದಮನಕ್ಕೆ ಸಮಾನವಾಗುತ್ತದೆ. ನಿಜವಾಗಿ ಸುಮಾರು 2,000 ವರ್ಷಗಳಿಂದ ದಮನಿತ ಸಮುದಾಯಗಳನ್ನು ಸತತವಾಗಿ ಅವಮಾನಿಸಿರುವ, ಅವಹೇಳನ ಮಾಡುವ ಹಲವಾರು ಶಬ್ದಗಳು, ಮಾತುಗಳು ಹಾಗೂ ಕ್ರಿಯೆಗಳು ಇಂದಿಗೂ ಜೀವಂತವಾಗಿಯೇ ಇವೆ; ಚಲಾವಣೆಯಲ್ಲಿವೆ. ಹೀಗಿರುವಾಗ, ಈ ಶಬ್ದಗಳ ಹಾಗೂ ಕ್ರಿಯೆಗಳ ಬಗ್ಗೆ ಏನನ್ನೂ ಮಾಡದೆ, ದಲಿತರ ಸ್ಥಾನಗಳನ್ನು ಅವರ ವಿರುದ್ಧವೇ ಬಳಸುವ, ಅವರ ವಿರುದ್ಧವೇ ಎತ್ತಿ ಕಟ್ಟುವ ಸರಕಾರದ ಒಂದು ಕ್ರಮವನ್ನು, ಹೆಜ್ಜೆಯನ್ನು ಬೇರೆ ಹೇಗೆ ಅರ್ಥೈಸುವುದು? ಅಥವಾ ಅರ್ಥ ಮಾಡಿಕೊಳ್ಳುವುದು?

ಕೃಪೆ:  thewire.in                    

Writer - ಜಯರಾಣಿ

contributor

Editor - ಜಯರಾಣಿ

contributor

Similar News