ಮುಖ್ಯಮಂತ್ರಿಯನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

Update: 2018-09-25 14:44 GMT

ಬೆಂಗಳೂರು, ಸೆ.25: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು.

ಕರ್ನಾಟಕ ಮತ್ತು ವಿಕ್ಟೋರಿಯಾದ ನಡುವೆ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ಆರೋಗ್ಯ, ಮೂಲಭೂತ ಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಉತ್ಸುಕವಾಗಿದೆ. ಆಸ್ಟ್ರೇಲಿಯಾದಲ್ಲಿ ಕರ್ನಾಟಕ ಮೂಲದ ಟೆರ್ರಾ ಬ್ಲೂ ಸ್ಟಾರ್ಟ್ ಅಪ್ ಕಂಪನಿ ಸೇರಿದಂತೆ ಇನ್ಫೋಸಿಸ್‌ನಂತಹ ದೈತ್ಯ ಕಂಪನಿಯೂ ಕಾರ್ಯನಿರ್ವಹಿಸುತ್ತಿವೆ ಎಂದು ವಿಕ್ಟೋರಿಯಾದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ವಿಕ್ಟೋರಿಯಾ ಹಾಗೂ ಕರ್ನಾಟಕದ ಸಹಯೋಗದಲ್ಲಿ ಏರೋಸ್ಪೇಸ್ ತಂತ್ರಜ್ಞಾನ, ಕೃಷಿಯಲ್ಲಿ ನೂತನ ವಿಧಾನಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಅಲ್ಲದೆ, ನಾವು ಒಟ್ಟಾಗಿ ಕಾರ್ಯನಿರ್ವಹಿಸಬಹುದಾದ ಮತ್ತಷ್ಟು ಕ್ಷೇತ್ರಗಳನ್ನು ಗುರುತಿಸಲಾಗುವುದು ಎಂದರು.

ಮುಂಬರಲಿರುವ ಬೆಂಗಳೂರು ಟೆಕ್ ಸಮಿಟ್- 2018ರಲ್ಲಿ ವಿಕ್ಟೋರಿಯಾದ ಕಂಪನಿಗಳು ಭಾಗವಹಿಸುವಂತೆ ಮುಖ್ಯಮಂತ್ರಿ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News