ಬಿಬಿಎಂಪಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಮೈಕ್ರೋಸಾಫ್ಟ್ ಜೊತೆ ಒಪ್ಪಂದ: ಪರಮೇಶ್ವರ್

Update: 2018-09-25 14:13 GMT

 ಬೆಂಗಳೂರು, ಸೆ.25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 156 ಶಾಲಾ ಹಾಗೂ ಕಾಲೇಜುಗಳನ್ನು ಆಧುನೀಕರಣಗೊಳಿಸಲು ಮೈಕ್ರೋಸಾಫ್ಟ್ ಸಹಯೋಗ ದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ತಿಳಿಸಿದರು.

ಮಂಗಳವಾರ ನಗರದಲ್ಲಿ ವೈಯ್ಯಲಿಕಾವಲ್‌ನಲ್ಲಿರುವ ಬಿಬಿಎಂಪಿ ವಲಯ ಕಚೇರಿಯಲ್ಲಿ ಸಾಮಾಜಿಕ ಶಿಕ್ಷಣ ಅಭಿಯಾನ ಪೂರ್ವ ಯೋಜಿತ(ರೋಷನಿ) ಕಾರ್ಯಕ್ರಮದ ಬಗ್ಗೆ ಅವರು ಮಾತನಾಡಿದರು. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಬಿಬಿಎಂಪಿ ಶಾಲೆಗಳ ಗುಣಮಟ್ಟ ಕಡಿಮೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಅದಕ್ಕಾಗಿ ಬಿಬಿಎಂಪಿಯಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಮೈಕ್ರೋಸಾಫ್ಟ್ ಕಂಪನಿ ‘ರೋಷನಿ’ ಶೀರ್ಷಿಕೆಯಡಿ ಮುಂದೆ ಬಂದಿದೆ ಎಂದು ಅವರು ಹೇಳಿದರು.

ಆಧುನಿಕತೆಗೆ ತಕ್ಕಂಥ ಶಿಕ್ಷಣ ನೀಡಲಿದೆ. ಶಿಕ್ಷಕರಿಗೆ ತರಬೇತಿ ನೀಡುವುದು, ಕಂಪ್ಯೂಟರ್ ಶಿಕ್ಷಣ ಸೇರಿ ಆಧುನಿಕ ಶಿಕ್ಷಣ ವ್ಯವಸ್ಥೆ ಅಳವಡಿಸಲಾಗುತ್ತದೆ. ಮೈಕ್ರೋ ಸಾಫ್ಟ್ ಐದು ವರ್ಷಗಳ ಕಾಲ ಬಿಬಿಎಂಪಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ನಂತರ ಬಿವಿಎಂಪಿಗೆ ಒಪ್ಪಿಸಲಿದೆ. ಇದಕ್ಕಾಗಿ ಬಿಬಿಎಂಪಿ ಆರ್ಥಿಕ ಸಹಕಾರ ನೀಡುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.

ಬಿವಿಎಂಪಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಸಂಪೂರ್ಣ ಹೊಣೆಯನ್ನು ಈ ಕಂಪನಿ ಹೊರಲಿದೆ. ಇದಕ್ಕಾಗಿ ಸುಮಾರು 600 ಕೋಟಿ ರೂ.ಹಣವನ್ನು ಈ ಸಂಸ್ಥೆ ವಿನಿಯೋಗಿಸುತ್ತಿದೆ. ಐದು ವರ್ಷದಲ್ಲಿ ಬಿಬಿಎಂಪಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ರೀತಿ ಬೆಳೆಯುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಿಯಂತ್ರಿಸಲು ಗಂಭೀರ ಚಿಂತನೆ ನಡೆಸಲಾಗಿದೆ. ಈಗಾಗಲೇ ವಸತಿ ಪ್ರದೇಶದಲ್ಲಿ ಪರವಾನಿಗೆ ಪಡೆದಿದ್ದರೆ ಅದನ್ನು ರದ್ದುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಜಾಹೀರಾತು ನೀತಿ ತರುವ ಕೆಲಸ ಈಗಾಗಲೇ ಅಂತಿಮ ಘಟ್ಟದಲ್ಲಿದ್ದು, ಶೀಘ್ರವೇ ತರಲಾಗುವುದು. ಹೈಕೋರ್ಟ್‌ನಿಂದ ನಿರ್ದೇಶನ ಬಂದರೆ ಮಾತ್ರ ಕೆಲಸ ಮಾಡುವ ಬಿಬಿಎಂಪಿ ಅಧಿಕಾರಿಗಳ ನಡೆ ಬೇಸರ ತರಿಸಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News