ಅ.15ರಿಂದ ಕರಾವಳಿಯಲ್ಲಿ ಸಾಂಪ್ರದಾಯಿಕ ಮರಳು ನೀತಿ ಜಾರಿಗೆ ಚಿಂತನೆ

Update: 2018-09-25 14:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25: ದಕ್ಷಿಣ ಕನ್ನಡ ಹಾಗೂ ಉಡುಪಿ ಜನತೆಗೆ ಸುಲಭ ದರದಲ್ಲಿ ಮರಳು ಸಿಗುವ ನಿಟ್ಟಿನಲ್ಲಿ ಈಗಿರುವ ಮರಳು ನೀತಿಯನ್ನು ಸರಳಗೊಳಿಸಿ ಅ.15ರಿಂದ ಸಾಂಪ್ರದಾಯಿಕ ಮರಳು ನೀತಿಗೆ ಅವಕಾಶ ಮಾಡಿಕೊಡಲು ಸರಕಾರ ತೀರ್ಮಾನಿಸಿದೆ.

ಮಂಗಳವಾರ ವಿಧಾನಸೌಧದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಮರಳು ಸಮಸ್ಯೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈ ಎರಡು ಜಿಲ್ಲೆಗಳ ಶಾಸಕರು ಹಾಗೂ ಸಂಸದರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ಮರಳು ಲಭ್ಯವಿದ್ದರೂ ಕಠಿಣ ಮರಳು ನೀತಿಯ ಕಾರಣದಿಂದಾಗಿ ಸಾಮಾನ್ಯ ಜನತೆಗೆ ಮರಳು ಸಿಗುತ್ತಿಲ್ಲ. ಹೀಗಾಗಿ ಸಿಆರ್‌ಝಡ್ ವ್ಯಾಪ್ತಿಯಲ್ಲಿರುವ ಮರಳನ್ನು ಅ.15ರೊಳಗೆ ಸರ್ವೆ ನಡೆಸಿ, ಈ ಹಿಂದೆ ಜಾರಿಯಲ್ಲಿದ್ದ ಸಾಂಪ್ರದಾಯಿಕ ಮರಳು ನೀತಿಗೆ ಅನುಮತಿ ಕೊಡಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ.

ಈ ಹಿಂದಿನಿಂದಲೂ ದಕ್ಷಿಣ ಕನ್ನಡದಲ್ಲಿ 120 ಹಾಗೂ ಉಡುಪಿಯಲ್ಲಿ 130 ಸಾಂಪ್ರದಾಯಿಕ ಮರಳು ತೆಗೆಯುವ ಕಾರ್ಖಾನೆಗಳಿವೆ. ಅ.15ರ ನಂತರ ಇವುಗಳಿಗೆ ಮರಳು ತೆಗೆಯಲು ಅನುಮತಿ ಕೊಡಲಾಗುವುದು. ಇದರಿಂದ ಇಲ್ಲಿನ ಜನತೆಗೆ ಸುಲಭ ದರದಲ್ಲಿ ಮರಳು ಲಭ್ಯವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಈ ವೇಳೆ ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಭಾಗದಲ್ಲಿ ಮರಳು ನೀತಿಯನ್ನು ಸರಳಗೊಳಿಸಿ, ಎಲ್ಲ ಜನತೆಗೆ ಸರಳವಾಗಿ ಮರಳು ಸಿಗುವಂತೆ ಮಾಡಲು ಸರಕಾರ ಒಪ್ಪಿದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿರುವ ಹೆಚ್ಚುವರಿ ಮರಳನ್ನು ಖಾಲಿ ಮಾಡಲು ಅನುಮತಿ ನೀಡಲಾಗಿದೆ. ಅ.15ರ ನಂತರ ಜನತೆಗೆ ಸುಲಭ ದರದಲ್ಲಿ ಮರಳು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್‌ನ ವಿಪಕ್ಷ ನಾಯಕ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮರಳಿನ ಕೊರತೆಯ ಕಾರಣಕ್ಕಾಗಿ ಕರಾವಳಿ ಭಾಗದಲ್ಲಿ ಸಾವಿರಾರು ಮನೆಗಳು ಪೂರ್ಣಗೊಂಡಿಲ್ಲ. ಹೀಗಾಗಿ ಅ.15ರ ನಂತರ ಮರಳು ನೀತಿ ಸರಳಗೊಳಿಸಿ, ಎಲ್ಲರಿಗೂ ಮರಳು ಸಿಗುವಂತೆ ಕ್ರಮ ಕೈಗೊಳ್ಳಲು ತೀರ್ಮಾನಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರಾವಳಿ ಭಾಗದಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಹಾಗೂ ಮೂಲಭೂತ ಅಗತ್ಯಗಳಿಗಾಗಿ ಸಣ್ಣ ವಾಹನಗಳ ಮೇಲೆ ಮರಳನ್ನು ಸಾಗಿಸುವವರನ್ನು ಹಿಡಿದು, ದಂಡ ವಸೂಲಿ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಜನತೆಗೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಎಚ್.ಡಿ.ಕುಮಾರಸ್ವಾಮಿಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ, ಮನೆ ಕಟ್ಟಲು ಸೇರಿದಂತೆ ಮೂಲಭೂತ ಅಗತ್ಯಗಳಿಗೆ ಮರಳು ಸಾಗಿಸುವವರ ಮೇಲೆ ಯಾವುದೆ ಕ್ರಮ ಕೈಗೊಳ್ಳದಿರಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News