ಮಾಧ್ಯಮ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಸರಕಾರದ ಆದೇಶ

Update: 2018-09-25 14:43 GMT

ಬೆಂಗಳೂರು, ಸೆ.25: ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಘೋಷಿಸಿದ್ದ ಮಾಧ್ಯಮ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕೆ ಸರಕಾರ ಆದೇಶ ಹೊರಡಿಸಿದೆ.

ಪತ್ರಕರ್ತರು ವೃತ್ತಿನಿರತ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ ಇಲ್ಲವೆ ಇನ್ನಿತರೆ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರುಗಳ ಕುಟುಂಬದವರಿಗೆ 5ಲಕ್ಷ ರೂ.ವರೆಗಿನ ಜೀವ ವಿಮೆ ಖಾತರಿ ನೀಡಲಿರುವ ಮಾಧ್ಯಮ ಸಂಜೀವಿನಿ ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವುದು.  

ಈ ಯೋಜನೆಯಡಿ ಪತ್ರಕರ್ತರಿಗೆ 5ಲಕ್ಷ ರೂ.ವರೆಗಿನ ಜೀವವಿಮೆ ಸೌಲಭ್ಯದ ಖಾತ್ರಿ ನೀಡಲಾಗುವುದು. ಈ ವಿಮೆ ಕಂತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಭರಿಸಲಾಗುವುದು. ಪತ್ರಕರ್ತರು ತಮ್ಮ 60 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಈ ಯೋಜನೆಯಿಂದ ರಾಜ್ಯದಾದ್ಯಂತ ಪ್ರಸ್ತುತ ಇರುವ 2065 ಮಾನ್ಯತೆ ಪಡೆದ ಪತ್ರಕರ್ತರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯನ್ನು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ 1999/2000 ರಡಿ ಟೆಂಡರ್ ಆಹ್ವಾನಿಸಿ ಕ್ರಮ ವಹಿಸಲಾಗುವುದು.

ಮಾಧ್ಯಮ ಸಂಜೀವಿನಿ ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವ ಯೋಜನೆಗೆ ಅನುಮತಿ ನೀಡಿ ಈ ಕೆಳಕಂಡ ಮಾನದಂಡಗಳನ್ವಯ ಆದೇಶಿಸಿದೆ.

ಪತ್ರಕರ್ತರು ಇಲಾಖೆಯಿಂದ ಮಾನ್ಯತೆ ಪತ್ರವನ್ನು ಪಡೆದಿರಬೇಕು. 25 ವರ್ಷದಿಂದ 60 ನೇ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪತ್ರಕರ್ತರು ವತ್ತಿನಿರತ ಕೆಲಸದ ಮೇಲೆ ಅಪಘಾತಕ್ಕೆ ಒಳಗಾದರೆ ಅಥವಾ ಗಂಭೀರ ಮತ್ತು ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಿಮಾ ಸೌಲಭ್ಯ ಪಡೆಯಲು ನಾಮ ನಿರ್ದೇಶಿತ ವ್ಯಕ್ತಿಯು ಕಂದಾಯ ಇಲಾಖೆಯಿಂದ ಕುಟುಂಬ ಅವಲಂಬಿತ ಪ್ರಮಾಣ ಪತ್ರವನ್ನು ಪಡೆದು ವಿಮಾ ಸಂಸ್ಥೆಗೆ ಸಲ್ಲಿಸಬೇಕು. ಕಾರ್ಯ ನಿರ್ವಹಿಸುವ ವೇಳೆಯಲ್ಲಿ ಅಮಾನತ್ತು ಇಲ್ಲವೆ ವಜಾಗೊಂಡಿರುವ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ. ಪತ್ರಕರ್ತರು ಕಾರ್ಯ ಅವಧಿಯಲ್ಲಿ ಭಾರತೀಯ ಪತ್ರಿಕಾ ಮಂಡಳಿ ಅಥವಾ ಐಬಿಎನಿಂದ ಛೀಮಾರಿ ಅಥವಾ ದಂಡ, ಇಲ್ಲವೆ ಎರಡೂ ಶಿಕ್ಷೆಗಳಿಗೆ ಗುರಿಯಾಗಿರುವಂತ ಪತ್ರಕರ್ತರು ಮತ್ತು ಸದನದ ಹಕ್ಕುಚ್ಯುತಿ ಸಮಿತಿಯ ದಂಡನೆಗೊಳಗಾದ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News