ಶಿವಾರಪಟ್ಟಣದ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿ: ಸಚಿವ ಕೃಷ್ಣಭೈರೇಗೌಡ

Update: 2018-09-25 15:00 GMT

ಬೆಂಗಳೂರು, ಸೆ.25: ಶಿಲ್ಪಕಲೆಗೆ ಹೆಸರಾದ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಅಭಿವೃದ್ಧಿಗೆ ಪೂರಕವಾಗುವಂತೆ ಹಾಗೂ ಶಿಲ್ಪಿಗಳ ಅನುಕೂಲಕ್ಕೆ ಬೇಕಾಗುವ ಪ್ರಸ್ತಾವನೆಯೊಂದನ್ನು ಸೂಕ್ತ ರೂಪುರೇಷೆಗಳೊಂದಿಗೆ ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದರು.

ಮಂಗಳವಾರ ವಿಕಾಸಸೌಧದಲ್ಲಿರುವ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳ ಹಿಂದೆ ಜಿಲ್ಲಾ ಪ್ರವಾಸದ ಸಮಯದಲ್ಲಿ ಶಿವಾರಪಟ್ಟಣದ ಶಿಲ್ಪಕಲಾ ಸಹಕಾರ ಸಂಘವು ಮನವಿ ಸಲ್ಲಿಸಿ, ಶಿವಾರಪಟ್ಟಣದ ಶಿಲ್ಪಕಲಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಕೋರಿದ್ದನ್ನು ಸ್ಮರಿಸಿದರು.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತದ ಉನ್ನತಾಧಿಕಾರಿಗಳ ಸಭೆಯನ್ನು ಹಮ್ಮಿಕೊಂಡಿದ್ದ ಅವರು, ಶಿಲ್ಪಕಲೆ ಅತ್ಯಂತ ಪ್ರಾಚೀನವಾದ ಮತ್ತು ಮಹತ್ವದ ಕಲೆಗಳಲ್ಲಿ ಒಂದು. ಕೋಲಾರ ಜಿಲ್ಲೆಯಲ್ಲಿ ಇಡೀ ಗ್ರಾಮವೇ ಶಿಲ್ಲಕಲೆಯನ್ನು ರೂಢಿಸಿಕೊಂಡು ಜೀವಿಸುತ್ತಿದೆ ಎಂದರು.

ಈ ಗ್ರಾಮವನ್ನು ಒಂದು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕು ಹಾಗೂ ಇಲ್ಲಿನ ಶಿಲ್ಪಿಗಳಿಗೆ ವೃತ್ತಿ ನೈಪುಣ್ಯತೆ ಮತ್ತು ಮಾರುಕಟ್ಟೆ ಒದಗಿಸುವ ಯೋಜನೆಯನ್ನು ರೂಪಿಸಬೇಕು. ಅದಕ್ಕೆ ಪೂರಕವಾಗಿ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಅವರು ಹೇಳಿದರು.

ಸಾಧ್ಯವಿರವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶಿವಾರಪಟ್ಟಣದ ಶಿಲ್ಪಕಲೆಗೆ ಪೂರಕವಾಗುವಂತೆ ಬೇಕಾಗಿರುವ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು. ಶಿಲ್ಪಕಲಾ ಅಕಾಡೆಮಿ ವತಿಯಿಂದ ಸಾಧ್ಯವಾದಷ್ಟು ಹೆಚ್ಚು ಹೆಚ್ಚಾಗಿ ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆಯೂ ಕೃಷ್ಣಭೈರೇಗೌಡ ತಿಳಿಸಿದರು.

ಸಭೆಯಲ್ಲಿ ಕೋಲಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಮತ್ತು ಪರಂಪರೆ ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News