ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಪ್ರಕ್ರಿಯೆ ಸುಸೂತ್ರ: ಸಚಿವ ಝಮೀರ್‌ ಅಹ್ಮದ್‌

Update: 2018-09-25 15:04 GMT

ಬೆಂಗಳೂರು, ಸೆ.25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಖಾತೆಗಳು ಇನ್ನೂ ಮೂಲ ಮಾಲಕರ ಹೆಸರಿನಲ್ಲೆ ಇದ್ದು, ಅವುಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ವರ್ಗಾಯಿಸಿಕೊಳ್ಳುವ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಮಂಗಳವಾರ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿಗಳಿಂದ ನಾಲ್ಕು ಪ್ರಮುಖ ಆಸ್ತಿಗಳಿಗೆ ಸಂಬಂಧಿಸಿದ ಖಾತೆಗಳನ್ನು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

1964ರಲ್ಲಿ ವಕ್ಫ್ ಆಸ್ತಿಗಳ ಮೊದಲ ಸರ್ವೆ ನಡೆದಿದ್ದು, ಒಂದು ವರ್ಷಗಳ ಕಾಲ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. 1965ರ ನಂತರ 128 ಆಸ್ತಿಗಳು ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿವೆ. ಆದರೆ, ಇವುಗಳ ಖಾತೆಯು ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿರಲಿಲ್ಲ ಎಂದು ಅವರು ಹೇಳಿದರು.

128 ಆಸ್ತಿಗಳಿಗೆ ಸಂಬಂಧಿಸಿದ 82 ಕಡತಗಳು ವಿಲೇವಾರಿಯಾಗದೆ ಹಾಗೆ ಉಳಿದಿದ್ದವು. ಈ ಪೈಕಿ 77 ಕಡತಗಳನ್ನು ಇತ್ತೀಚೆಗೆ ವಿಲೇವಾರಿ ಮಾಡಿಸಲಾಗಿದೆ. ಇವತ್ತು ಟ್ಯಾನರಿ ರಸ್ತೆಯ ಮಸ್ತಾನಿ ಅಮ್ಮಾ ದರ್ಗಾ, ಡಿ.ಜೆ.ಹಳ್ಳಿಯ ಮೈಸೂರು ಲ್ಯಾನ್ಸರ್ಸ್‌ ಈದ್ಗಾ, ಮತ್ತಿಕೆರೆಯ ಮಸ್ಜಿದೆ ತಾಹಾ ಹಾಗೂ ಯಶವಂತಪುರದ ಅಲ್ ರಿಸಾಲತ್ ಟ್ರಸ್ಟ್‌ಗೆ ಸಂಬಂಧಿಸಿದ ಖಾತೆಗಳನ್ನು ಬಿಬಿಎಂಪಿ ಅಧಿಕಾರಿಗಳು ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡಿದ್ದಾರೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಗೆಜೆಟ್ ನೋಟಿಫಿಕೇಷನ್ ಆಗಿರುವ ಸುಮಾರು 43 ಆಸ್ತಿಗಳ ಖಾತೆಗಳಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ 15 ರಿಂದ 20 ಆಸ್ತಿಗಳ ಖಾತೆಗಳು ನಮ್ಮ ಕೈಸೇರಲಿವೆ. ಇನ್ನುಳಿದಂತೆ ಹಲವು ಆಸ್ತಿಗಳ ಸರ್ವೆ ಸೇರಿದಂತೆ ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇವೆ. ಅವು ಪೂರ್ಣಗೊಂಡ ನಂತರ ಉಳಿದ ಆಸ್ತಿಗಳ ಖಾತೆಗಳು ಸಿದ್ಧವಾಗಲಿವೆ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಸಭೆಯಲ್ಲಿ ರಾಜ್ಯ ವಕ್ಫ್‌ಬೋರ್ಡ್ ಆಡಳಿತಾಧಿಕಾರಿ ಇಬ್ರಾಹೀಂ ಅಡೂರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ಫರಾಜ್‌ ಖಾನ್ ಸರ್ದಾರ್, ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್, ಉಬೇದುಲ್ಲಾ ಶರೀಫ್, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News