ಬಿಬಿಎಂಪಿಯ ಎಲ್‌ಇಡಿ ಅಳವಡಿಸುವ ಯೋಜನೆಯಲ್ಲಿ 600 ಕೋಟಿ ಲೂಟಿ: ಎನ್.ಆರ್.ರಮೇಶ್ ಗಂಭೀರ ಆರೋಪ

Update: 2018-09-25 15:10 GMT

ಬೆಂಗಳೂರು, ಸೆ.25: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿದೀಪ ಅಳವಡಿಸುವ ಯೋಜನೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸುಮಾರು 600 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೀದಿದೀಪ ಅಳವಡಿಸುವ 1600 ಕೋಟಿ ಹಗರಣದ ಈ ಯೋಜನೆಯ ಗುತ್ತಿಗೆ ಪಡೆದಿರುವ ಶಾಪುರ್‌ಜೀ, ಎಸ್‌ಎಂಸಿ ಇನ್ಫಾಸ್ಟ್ರಕ್ಚರ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿಂದ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಚುನಾವಣೆಗಾಗಿ 600 ಕೋಟಿ ರೂ. ಮೊತ್ತದ ಕಿಕ್ ಬ್ಯಾಕ್ ಪಡೆದಿರುವುದಾಗಿ ದೂರಿದರು.

ಪಾಲಿಕೆ ವ್ಯಾಪ್ತಿಯಲ್ಲಿ 5.3 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪವಾಗಿ ಬದಲಿಸಲು ಯೋಜನೆ ರೂಪಿಸಲಾಗಿತ್ತು. 2018ರ ವಿಧಾನಸಭೆ ಚುನಾವಣೆ ಘೋಷಣೆ ಮಾಡುವ 8 ದಿನ ಮೊದಲು ಆತುರಾತುರವಾಗಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಎಲ್ಇಡಿ ದೀಪ ಅಳವಡಿಸುವ ಮೂಲಕ ಹಣ ಉಳಿಸುವ ಯೋಜನೆ ಇದಾಗಿದೆ. ಪ್ರತಿ ತಿಂಗಳು ಪಾಲಿಕೆಗೆ 20 ಕೋಟಿ ರೂ.ಗಳ ಬಿಲ್ ಬರುತ್ತಿತ್ತು. ಎಲ್ಇಡಿ ಬಲ್ಪ್ಅಳವಡಿಸಿದ್ದರಿಂದ 17 ಕೋಟಿ ಉಳಿಸಿದಂತಾಗುತ್ತದೆ. ಆದರೆ, 10 ವರ್ಷ ಟೆಂಡರ್ ನೀಡಿ ಬಹುಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಹೇಳಿದರು.

ಈ ಯೋಜನೆ ಕೈಬಿಟ್ಟು ಕೇವಲ 204 ಕೋಟಿ ಹಣದಲ್ಲಿ ಎಲ್ಇಡಿ ಬಲ್ಪ್ಗಳನ್ನು ಅಳವಡಿಸಬಹುದಾಗಿತ್ತು. ಆದರೆ, ಹಣ ಲೂಟಿ ಹೊಡೆಯಲು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಯೋಜನೆ ಅನುಷ್ಠಾನದ ಹೆಸರಿನಲ್ಲಿ ಲೂಟಿ ಮಾಡಿರುವ ಸಚಿವ ಕೆ.ಜೆ.ಜಾರ್ಜ್‌ರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.

ದೂರು: ಈ ಹಗರಣ ಪ್ರಕರಣ ಸಂಬಂಧ ಲೋಕಾಯುಕ್ತ ಎಸಿಬಿ ಹಾಗೂ ಬಿಎಂಟಿಎಫ್‌ನಲ್ಲಿ ದೂರು ನೀಡಲಾಗಿದ್ದು, ರಾಜ್ಯ ಸರಕಾರವು ಸಿಬಿಐ ತನಿಖೆಗೆ ಮತ್ತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News