ಮೇಯರ್ ಚುನಾವಣೆ: ಚುನಾವಣಾಧಿಕಾರಿ ಶಿವಯೋಗಿ ಸ್ಥಳ ಪರಿಶೀಲನೆ

Update: 2018-09-25 15:27 GMT

ಬೆಂಗಳೂರು, ಸೆ.25: ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆಗೆ ಸೆ.28ರಂದು ನಡೆಯಲಿರುವ ಚುನಾವಣೆ ಸಿದ್ಧತೆಗಳನ್ನು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಪರಿಶೀಲನೆ ನಡೆಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಹಾಗೂ ಇತರ ಅಧಿಕಾರಿಗಳೊಂದಿಗೆ ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣಕ್ಕೆ ಭೇಟಿ ನೀಡಿದ ಅವರು, ಸಿದ್ಧತೆಗಳ ಕುರಿತು ಕೌನ್ಸಿಲ್ ಕಾರ್ಯದರ್ಶಿ ಕೆ.ಆರ್.ಪಲ್ಲವಿ ಅವರಿಂದ ಮಾಹಿತಿ ಪಡೆದುಕೊಂಡರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜತೆಗೆ ಮತದಾರರು ಹಾಗೂ ಅಧಿಕಾರಿಗಳು ಸೇರಿ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಬೇಕು ಹಾಗೂ ಗುರುತಿನ ಚೀಟಿ ಇಲ್ಲದ ಯಾರನ್ನೂ ಚುನಾವಣೆ ನಡೆಯುವ ಸ್ಥಳ ಪ್ರವೇಶಿಸಲು ಬಿಡಬಾರದು. ಸಂಪೂರ್ಣ ಚುನಾವಣೆ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.

ನಾಲ್ವರ ವಿರುದ್ಧ ಬಿಜೆಪಿ ದೂರು: ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಮತದಾರರಾದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್, ರಘು ಆಚಾರ್ ಮತ್ತು ಉಗ್ರಪ್ಪಅವರಿಗೆ ಮತದಾನ ಮಾಡಲು ಅವಕಾಶ ನೀಡದಂತೆ ಪ್ರಾದೇಶಿಕ ಆಯುಕ್ತರಿಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ದೂರು ಸಲ್ಲಿಸಿದ್ದಾರೆ.

ನಾಲ್ಕು ಮತದಾರರು ತಾವು ಆಯ್ಕೆಯಾಗಿರುವ ಕ್ಷೇತ್ರ ಮತ್ತು ತಮ್ಮ ನೋಡಲ್ ಕ್ಷೇತ್ರದ ಬದಲಿಗೆ ಬೆಂಗಳೂರಿನಲ್ಲಿ ಮತದಾನ ಮಾಡುತ್ತಿದ್ದಾರೆ. ಅವರಿಗೆ ದೊರೆಯುವ ಅನುದಾನವನ್ನು ತಮ್ಮ ನೋಡಲ್ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುತ್ತಿದ್ದು, ಅಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಮತಚಲಾಯಿಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿತು, ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕಾರಕ್ಕಾಗಿ ಬಿಬಿಎಂಪಿಗೆ ಬಂದು ಮತಚಲಾಯಿಸುವುದು ಸರಿಯಲ್ಲ. ಹೀಗಾಗಿ ಅವರುಗಳಿಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News