ಇ-ಫಾರ್ಮಸಿ ವಿತರಣಾ ವ್ಯವಸ್ಥೆಗೆ ವಿರೋಧ: ಸೆ.28ಕ್ಕೆ ಔಷಧಿ ಅಂಗಡಿಗಳ ಬಂದ್

Update: 2018-09-25 15:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25: ಇ-ಫಾರ್ಮಸಿ ವಿತರಣಾ ವ್ಯವಸ್ಥೆಯನ್ನು ದೇಶದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರಕಾರ, ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದೆ ಎಂದು ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಸೆ.28ರಂದು ರಾಜ್ಯದಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ. 

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ರಘುನಾಥ್ ರೆಡ್ಡಿ ಮಾತನಾಡಿ, ಇ-ಫಾರ್ಮಸಿ ಎಂಬ ಕೇಂದ್ರ ಸರಕಾರದ ಹೊಸ ನೀತಿಯ ವಿರುದ್ಧ ಗ್ರಾಹಕರನ್ನು ಜಾಗೃತಗೊಳಿಸಿ, ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವ್ಯಾಪಾರಸ್ಥರಾಗಿ ನಮ್ಮ ಮೇಲಿದೆ. ಕಾನೂನಾತ್ಮಕವಲ್ಲದ ರೀತಿಯಲ್ಲಿ ಇ-ಫಾರ್ಮಸಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಔಷಧಿ ಮೂಲವೇ ಗೊತ್ತಿಲ್ಲದೆ, ವಿತರಕನು ಯಾರು ಎಂಬುದನ್ನೇ ಅರಿಯದೆ, ಗುಣಮಟ್ಟದ ಪರಿಶೀಲಕನಾದ ಔಷಧ ನಿಯಂತ್ರಣಾಧಿಕಾರಿಗೂ ತಿಳಿದಿರದೆ, ಔಷಧಿಯ ವಿಷಯವನ್ನೇ ತಿಳಿಯದವನು ಇ-ಫಾರ್ಮಸಿ ವ್ಯವಸ್ಥೆಯಡಿ ಔಷಧಿಗಳನ್ನು ಎಲ್ಲಿಂದಲೋ ವಿತರಣೆ ಮಾಡಿದ್ದಲ್ಲಿ ಗ್ರಾಹಕನ ಆರೋಗ್ಯ ಸಂಪೂರ್ಣ ಹದಗೆಡುವ ಸಾಧ್ಯತೆಯೂ ಹೆಚ್ಚು. ಹಾಗೂ ಏನಾದರೂ ಆದಲ್ಲಿ ಕಾನೂನಾತ್ಮಕವಾಗಿ ಆರೋಪಿಸಲು ಇ-ಫಾರ್ಮಸಿಯಲ್ಲಿ ಸರಿಯಾದ ವ್ಯವಸ್ಥೆಯಿರುವುದಿಲ್ಲ ಎಂದು ಆತಂಕಪಟ್ಟರು. ಗ್ರಾಹಕರೇ, ಎಚ್ಚೆತ್ತುಕೊಳ್ಳಿ ಕೇಂದ್ರ ಸರಕಾರದ ಹೊಸ ನೀತಿಯಾಗಿ ಬರಲಿರುವ ಇ-ಫಾರ್ಮಸಿ ವಿರೋಧಿಸಿ 088 20209797 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ ಎಂದು ಗ್ರಾಹಕರನ್ನು ವಿನಂತಿಸಿದ್ದಾರೆ.

ವಿಶೇಷ ಸೂಚನೆ: ವೈದ್ಯಕೀಯ ಸಂಸ್ಥೆಗಳನ್ನೊಳಗೊಂಡ ಆಸ್ಪತ್ರೆಗಳಲ್ಲಿ ಸೆ.28ರಂದು ಔಷಧಿ ದೊರೆಯುತ್ತವೆ ಎಂದು ಕೆಸಿಡಿಎ ತಿಳಿಸಿದೆ.

ಬಂದ್‌ಗೆ ಎಸ್‌ಕೆಕೆಡಿಎ ಬೆಂಬಲವಿಲ್ಲ

ವಿವಿಧ ಸಂಘಟನೆಗಳು ಕರೆದಿರುವ ಔಷಧಿ ವ್ಯಾಪಾರಿಗಳ ಬಂದ್‌ಗೆ ಸಾರ್ವಜನಿಕರು ಹಾಗೂ ರೋಗಿಗಳ ಹಿತದೃಷ್ಟಿಯಿಂದ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಬೆಂಬಲ ನೀಡುತ್ತಿಲ್ಲ. ಇ-ಫಾರ್ಮಸಿ ವಿರುದ್ಧವಾಗಿ ಶಾಂತಿಯುತವಾಗಿ ಕಾನೂನಾತ್ಮಕವಾದ ಹೋರಾಟಗಳನ್ನು ಮಾಡಲು ಸಂಘವು ಬದ್ಧವಾಗಿದ್ದು, ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಎಲ್ಲ ಸಚಿವಾಲಯಗಳಿಗೆ ಹಾಗೂ ಇಲಾಖೆಗಳಿಗೆ ಮನವಿ ಸಲ್ಲಿಸುವುದರ ಮೂಲಕ ಪ್ರತಿಭಟನೆ ಮಾಡುತ್ತೇವೆ.

-ಎಂ.ಪಿ.ಮೇದಪ್ಪ,  ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News