ಅಶೋಕ್ ವಿರುದ್ಧದ ಬಗರ್ ಹುಕುಂ ಅಕ್ರಮ ಮಂಜೂರಾತಿ ಪ್ರಕರಣ: ತನಿಖೆ ಮುಂದುವರಿಸಲು ಎಸಿಬಿಗೆ ಹೈಕೋರ್ಟ್ ಸೂಚನೆ

Update: 2018-09-25 15:36 GMT

ಬೆಂಗಳೂರು, ಸೆ.25: ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧದ ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖೆ ಮುಂದುವರಿಸಲು ಎಸಿಬಿಗೆ ಸೂಚಿಸಿದೆ.

ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಕೋರಿ ಆರ್.ಅಶೋಕ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಮಂಗಳವಾರ ಎಫ್‌ಐಆರ್‌ಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರಿಸಲು ಸೂಚಿಸಿದೆ.

ಎಸಿಬಿಯು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಈ ಹಂತದಲ್ಲಿ ಎಫ್‌ಐಆರ್ ರದ್ದುಪಡಿಸುವುದು ಸೂಕ್ತವಲ್ಲ. ಹೀಗಾಗಿ, ಎಸಿಬಿ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ: ಆರ್.ಅಶೋಕ್ 1998 ರಿಂದ 2006ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಪೊಲೀಸರು ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಅಶೋಕ್, ತಾವು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದರು.

ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ಎಫ್ಐಆರ್ ಆಧರಿಸಿ ತಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಎಸಿಬಿಗೆ ನಿರ್ದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಈ ಹಿಂದೆ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ಮಂಗಳವಾರ ಅಶೋಕ್ ಅವರ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಎಫ್‌ಐಆರ್‌ಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ತನಿಖೆಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News