ಬೆಂಗಳೂರಿನಾದ್ಯಂತ ಮುಂದುವರೆದ ಮಳೆ: ಚೇತರಿಸಿಕೊಳ್ಳಲು ಪರಿತಪಿಸುತ್ತಿರುವ ಜನತೆ

Update: 2018-09-25 15:53 GMT

ಬೆಂಗಳೂರು, ಸೆ.25: ನಗರದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಹತ್ತಾರು ಅಪಾರ್ಟ್‌ಮೆಂಟ್‌ಗಳು, ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರವನ್ನು ಸೃಷ್ಟಿಸಿದ್ದು, ಸ್ಥಳೀಯ ನಿವಾಸಿಗಳು ಚೇತರಿಸಿಕೊಳ್ಳಲು ಪರಿತಪಿಸುತ್ತಿದ್ದಾಗಲೇ, ಮಂಗಳವಾರವೂ ನಗರದಲ್ಲಿ ಮಳೆ ಮುಂದುವರಿದಿದ್ದು, ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಮಂಗಳವಾರ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು, ಕೆಲವು ಕಡೆ ಭೂ ಕುಸಿತ ಕಂಡಿದೆ. ಇನ್ನೂ ಒಂದು ವಾರ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನಗರದಾದ್ಯಂತ ತಗ್ಗು ಪ್ರದೇಶದಲ್ಲಿರುವ ಜನರು ಆತಂಕದ ಸ್ಥಿತಿಯಲ್ಲಿದ್ದಾರೆ.

ಮರಗಳು ಧರೆಗೆ: ಮಂಗಳವಾರ ಸುರಿದ ಮಳೆಗೆ ದಮ್ಮಲೂರಿನಲ್ಲಿ ಒಂದು ಮರ, ಸೋಮವಾರ ರಾತ್ರಿ ಎಂಎಸ್‌ಆರ್ ನಗರ, ಗಿರಿನಗರ, ಜಯದೇವ ಆಸ್ಪತ್ರೆ ಹಿಂಭಾಗ, ರಾಜಾಜಿನಗರ, ಬಸವೇಶ್ವರ ನಗರ, ಮಲ್ಲೇಶ್ವರ, ಚಂದ್ರಾ ಲೇಔಟ್ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದವು. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಸುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಯಿತು. ಬಿದ್ದ ಮರಗಳ ತೆರವಿಗೆ ಬಿಬಿಎಂಪಿ ಅರಣ್ಯ ಪಡೆ ಹರಸಾಹಸ ಪಡಬೇಕಾಯಿತು.

ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನಗರದ ಬನ್ನೇರುಘಟ್ಟ ರಸ್ತೆಯ ಹುಳಿಮಾವು, ಗೊಟ್ಟಿಗೆರೆ, ಅರಕೆರೆ, ಅಂಜನಾಪುರ, ಬೇಗೂರು, ತಿಪ್ಪಸಂದ್ರ, ಶೆಟ್ಟಿಹಳ್ಳಿ, ಯಲಹಂಕ, ಜಕ್ಕೂರು, ಯಶವಂತಪುರ, ಎಚ್‌ಬಿಆರ್ ಬಡಾವಣೆ, ನಂದಿನಿ ಬಡಾವಣೆ, ಜ್ಞಾನಭಾರತಿ, ನಾಗರಭಾವಿ, ಕೆಂಗೇರಿ, ಹಂಪಿನಗರ, ರಾಜಾಜಿನಗರ, ಬಸವನಗುಡಿ, ಸಂಪಂಗಿ ರಾಮನಗರ, ಮಾರತ್‌ಹಳ್ಳಿ, ವಿವಿಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಈ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡಿದೆ.

ಚರಂಡಿಗೆ ನುಗ್ಗಿದ ಕಾರು: ಮಳೆಯಿಂದ ನಾಯಂಡಹಳ್ಳಿಯಲ್ಲಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ದಾರಿ ಗೊತ್ತಾಗದೆ ಪಕ್ಕದ ಚರಂಡಿಗೆ ನುಗ್ಗಿದೆ. ಬಳಿಕ ಹರಸಾಹಸ ಪಟ್ಟು ಹೊರ ತೆಗೆಯಬೇಕಾಯಿತು.

ಮಳೆ ಅವಾಂತರಕ್ಕೆ ಕಾರಣ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಳೆ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂಬುದಕ್ಕೆ ಇದೊಂದು ಕಾರಣವಾಗಿದೆ. ನಗರದಲ್ಲಿ ಸುರಿದ ಮಳೆಯಿಂದಾಗಿ ಕೆರೆ ಕೋಡಿಗಳು ತುಂಬಿ ಹರಿಯುತ್ತಿವೆ. ಆದರೆ, ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯದೇ ರಸ್ತೆಗೆ ಬಂದಿದ್ದರ ಪರಿಣಾಮದಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಪಾಲಿಕೆಯು ಮಳೆಯಿಂದಾಗುವ ಅನಾಹುತವನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಅಲ್ಲದೆ, ನಗರದ ಬಹುತೇಕ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ಪಾಲಿಕೆಯ ಸಿಬ್ಬಂದಿಯೂ ತೆರಳಿಲ್ಲ. ಎಲ್ಲವೂ ಮುಗಿದ ಮೇಲೆ ಬಂದಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಮ್ಮ ಬಡಾವಣೆಯಲ್ಲಿ ಮೊದಲಿನಿಂದಲೂ ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಪಕ್ಕದ ಕ್ಲಾಸಿಕ್ ಬಡಾವಣೆವರೆಗೆ ಮಳೆ ನೀರು ಹರಿಯುವ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ನಮ್ಮ ಬಡಾವಣೆಯಲ್ಲಿ ಬಿದ್ದ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಬಿಡಿಎ ನಮ್ಮ ಬಡಾವಣೆ ನಿರ್ಮಿಸಿ 20 ವರ್ಷಗಳು ಕಳೆಯುತ್ತಿದೆ. ಆದರೆ, ಇದುವರೆಗೂ ಇಲ್ಲಿ ಡಾಂಬರೀಕರಣ ಮಾಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿದ್ದಗೆಟ್ಟ ನಿವಾಸಿಗಳು: ನಗರದಲ್ಲಿ ಸುರಿದ ಮಳೆಯಿಂದಾಗಿ ಮನೆಗಳು, ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳು ಎಂಬ ಭೇದ-ಭಾವವಿಲ್ಲದೆ ಎಲ್ಲ ಕಡೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ ಆತಂಕ ವಾತಾವರಣ ನಿರ್ಮಾಣಗೊಂಡು ಸರಿಯಾದ ನಿದ್ದೆ ಮಾಡದೇ ಹಗಲು-ರಾತ್ರಿ ಸ್ವಚ್ಛ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಅಲ್ಲದೆ, ಮತ್ತೆ ಮಳೆ ಬಂದರೆ ಗತಿ ಏನು ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ. ಅಲ್ಲದೆ, ಮಳೆ ನೀರು ಹರಿದುಬಂದಿರುವುದರಿಂದ ಕಾಲುವೆ, ಮೋರಿಗಳಲ್ಲಿದ್ದ ಗಲೀಜು ಸೇರಿದಂತೆ ಹಾವು, ಚೇಳುಗಳು ಮನೆಗಳಲ್ಲಿ ಸೇರಿಕೊಂಡಿದ್ದು, ನಿವಾಸಿಗಳಲ್ಲಿ ಮತ್ತಷ್ಟು ಭಯದ ವಾತಾವರಣವನ್ನು ಸೃಷ್ಟಿಸಿದೆ. ನೀರನ್ನು ತೆರವು ಮಾಡಿದರೂ, ಹಾವು, ಚೇಳುಗಳನ್ನು ಹುಡುಕುವುದು ಹೇಗೆ ಎಂಬ ಚಿಂತೆಯಲಿದ್ದಾರೆ. ಮತ್ತೊಂದು ಕಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ದಿನಬಳಕೆ ವಸ್ತುಗಳು, ಬಟ್ಟೆಗಳೆಲ್ಲವೂ ಸಂಪೂರ್ಣವಾಗಿ ಹಾಳಾಗಿವೆ. 

ರವಿವಾರದಿಂದ ಸತತವಾಗಿ ಆರಂಭಗೊಂಡಿದ್ದ ಮಳೆಯು ನಗರದ ಕೇಂದ್ರ ಭಾಗದಲ್ಲಿ 53 ಮಿ.ಮೀ.ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ದಕ್ಷಿಣ ಭಾಗದಲ್ಲಿ 120 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಇನ್ನುಳಿದಂತೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 9 ಮಿ.ಮೀ. ಮಳೆಯಾಗಿದೆ. ಒಟ್ಟಾಗಿ ಸೆ.1 ರಿಂದ ಸೆ.24 ರವರೆಗೂ ನಗರದಲ್ಲಿ ಸುಮಾರು 167 ಮಿ.ಮೀ.ಗೂ ಅಧಿಕ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಂಗಳ ಅಂತ್ಯದವರೆಗೂ ಮಳೆ

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ ಮೋಡ ಕವಿತ ವಾತಾವರಣವಿರಲಿದ್ದು, ಸಿಡಿಲು-ಗುಡುಗು ಸಮೇತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಮ್ಮದು ಸಣ್ಣ ಮನೆ. ಸೋಮವಾರ ಸುರಿದ ಮಳೆಯಿಂದಾಗಿ ನೀರು ಮನೆಗೆ ನುಗ್ಗಿದ್ದು, ಪೂರ್ತಿ ಮನೆಯನ್ನು ಆವರಿಸಿಕೊಂಡಿದೆ. ನನ್ನ ಮಗಳ ಶಾಲೆಯ ಬ್ಯಾಗ್ ಸಂಪೂರ್ಣವಾಗಿ ನೀರಿನಲ್ಲಿ ನೆನೆದು ಒದ್ದೆಯಾಗಿದೆ. ಶಾಲಾ ಸಮವಸ್ತ್ರವೂ ನೀರಿನಲ್ಲಿ ನೆನೆದು ಹಾಳಾಗಿದೆ. ಅವಳನ್ನು ಶಾಲೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ.

-ರೇಣುಕಾ, ಸ್ಥಳೀಯ ನಿವಾಸಿ, ರಾಜಮ್ಮ ಲೇಔಟ್(ಉತ್ತರಹಳ್ಳಿ)

ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ಬನ್ನೇರುಘಟ್ಟದಲ್ಲಿ 110 ಮಿ.ಮೀ., ಮಂಟಪ 102 ಮಿ.ಮೀ., ಹುಲಿಮಂಗಳ 73 ಮಿ.ಮೀ., ಶಾಂತಿಪುರ 30.5 ಮಿ.ಮೀ., ವೀರಸಂದ್ರ 41.5ಮಿ.ಮೀ., ಕಗ್ಗಲಿಪುರ 32 ಮಿ.ಮೀ., ದೊಡ್ಡಗುಬ್ಬಿ 11.5 ಮಿ.ಮೀ., ನಂದಗುಡಿ 27ಮಿ.ಮೀ., ಶಿವನಪುರದಲ್ಲಿ 30ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News