ಶೋಷಿತರ ಪರ ಧ್ವನಿಯೆತ್ತಿದವರಿಗೆ ‘ನಗರ ನಕ್ಸಲ್’ ಪಟ್ಟ

Update: 2018-09-25 18:39 GMT

ಭೀಮಾ ಕೋರೆಗಾಂವ್ ಹಿಂಸಾಚಾರದ ಹಿಂದಿದ್ದಾರೆಂದು, ಇತ್ತೀಚೆಗೆ ಪ್ರಗತಿಪರ ಹೋರಾಟಗಾರರಾದ ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್, ವರವರ ರಾವ್, ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರನ್ನು ಬಂಧಿಸಲಾಗಿತ್ತು. ಇವರಿಗೆ ನಗರ ನಕ್ಸಲರೆಂದು ಹಣೆಪಟ್ಟಿ ಕೂಡಾ ಕಟ್ಟಲಾಗಿದೆ. ಆದರೆ ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶದಿಂದಾಗಿ ಈ ಚಿಂತಕರು ಜೈಲುವಾಸದಿಂದ ಮುಕ್ತರಾಗಿದ್ದಾರೆ. ಶೋಷಿತ ವರ್ಗಗಳ ಪರ ಧ್ವನಿಯೆತ್ತ್ತುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಕೇಂದ್ರ ಸರಕಾರ ಯತ್ನಿಸುತ್ತಿರುವುದು ಈ ಬಂಧನ ಕಾರ್ಯಾಚರಣೆಗಳಿಂದ ಬೆಳಕಿಗೆ ಬಂದಿದೆ.


ಭೀಮಾ ಕೋರೆಗಾಂವ್ ಹಿಂಸಾಚಾರದ ಘಟನೆಯು ಇನ್ನೂ ಪ್ರತಿಧ್ವನಿಸುತ್ತಲೇ ಇದೆ. ಜನವರಿ 1ರಂದು ಭೀಮಾಕೋರೆಗಾಂವ್‌ನ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಸಾವಿರಾರು ದಲಿತರು ಥಳಿಸಲ್ಪಟ್ಟಿದ್ದರು. ಹಿಂಸಾಚಾರದ ಸೂತ್ರಧಾರಿಗಳೆಂದು ಮಿಲಿಂದ್ ಏಕ್‌ಬೋಟೆ ಹಾಗೂ ಸಾಂಬಾಜಿ ಭಿಡೆ ವಿರುದ್ಧ ಆರೋಪ ಹೊರಿಸಲಾಗಿದ್ದು ಈ ಬಗ್ಗೆ ತನಿಖೆ ಕೂಡಾ ನಡೆಯುತ್ತಿದೆ. ಇದಕ್ಕೂ ಮುನ್ನ ಆದಿವಾಸಿಗಳು ಹಾಗೂ ದಲಿತರಿಗೆ ಸಂಬಂಧಿಸಿದ ವಿಷಯಗಳಿಗಾಗಿ ಹೋರಾಡುತ್ತಿದ್ದ ಐವರು ಕಾರ್ಯಕರ್ತರಾದ ಮಹೇಶ್ ರಾವತ್, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್ ಹಾಗೂ ಸುಧೀರ್ ಧವಳೆ ಅವರನ್ನು ಬಂಧಿಸಲಾಗಿತ್ತು. ಇದೀಗ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಗತಿಪರ ಹೋರಾಟಗಾರರಾದ ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್, ವರವರ ರಾವ್, ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರನ್ನು ಬಂಧಿಸಲಾಗಿದ್ದರೆ, ಆನಂದ್ ತೇಲ್‌ತುಂಬ್ಡೆ ಹಾಗೂ ಇತರ ಹಲವರ ಮನೆಗಳ ಮೇಲೆ ದಾಳಿ ನಡೆದಿದೆ. ಈ ಎಲ್ಲಾ ಹೋರಾಟಗಾರರು ಭೀಮಾ ಕೋರೆಗಾಂವ್ ಹಿಂಸಾಚಾರದ ಹಿಂದಿದ್ದಾರೆಂಬುದು ಪೊಲೀಸರು ಆರೋಪವಾಗಿದೆ.

ಭೀಮಾಕೋರೆಗಾಂವ್‌ನಲ್ಲಿ ನಡೆದ ಎಲ್ಗಾರ್ ಪರಿಷತ್‌ನ ಸಭೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದುದೇ ಹಿಂಸಾಚಾರಕ್ಕೆ ಕುಮ್ಮಕ್ಕು ದೊರೆಯಿತೆಂದು ಪೊಲೀಸರು ಆರೋಪಿಸಿದ್ದರು. ಆನಂತರ ಪೊಲೀಸರು ಅತ್ಯಂತ ಅಸಹ್ಯವಾದ ರೀತಿಯಲ್ಲಿ ಪತ್ರವೊಂದನ್ನು ಹಾಜರುಪಡಿಸಿ, ಪ್ರಧಾನಿ ಮೋದಿಯವರನ್ನು ಹತ್ಯೆಗೈಯುವ ಸಂಚನ್ನು ಬಯಲಿಗೆಳೆದಿರುವುದಾಗಿ ಹೇಳಿಕೊಂಡಿದ್ದರು. ಕುತೂಹಲಕರವೆಂದರೆ ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶ ದಿಂದಾಗಿ ಅವರ ಬಂಧನ ಕಾರ್ಯಾಚರಣೆ ಸ್ಥಗಿತಗೊಂಡಿತು. ‘‘ಈ ಚಿಂತಕರ ಬಂಧನವು ನಮ್ಮ ಪ್ರಜಾಪ್ರಭುತ್ವದ ಸುರಕ್ಷತೆಯ ಕವಾಟವನ್ನು ಕಿತ್ತುಹಾಕಿದಂತೆ’’ ಎಂದು ನ್ಯಾಯಾಲಯವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಮುಂದಿನ ನ್ಯಾಯಾಂಗ ವಿಚಾರಣೆಯವರೆಗೆ ಈ ಹೋರಾಟಗಾರರನ್ನು ಗೃಹಬಂಧನದಲ್ಲಿಡುವಂತೆ ನ್ಯಾಯಾಲಯ ಆದೇಶಿಸಿತ್ತು.

  ಈ ಬಂಧನ ಕಾರ್ಯಾಚರಣೆಗಳು ದಲಿತ ಪರ ಹೋರಾಟಗಾರರಲ್ಲಿ ಭೀತಿ ಮೂಡಿಸುವ ಉದ್ದೇಶದಿಂದ ಅವರನ್ನು ಬೆದರಿಸಲು ನಡೆಯುತ್ತಿರುವ ಪ್ರಯತ್ನಗಳೆಂದು ವಿವಿಧ ರಾಜಕೀಯ ವ್ಯಕ್ತಿಗಳು ಹಾಗೂ ಸಂಘಟನೆಗಳು ಈ ಹಿಂದೆಯೂ ಹಾಗೂ ಈಗಲೂ ದೃಢಪಡಿಸಿದ್ದಾರೆ. ಇದೊಂದು ಸೇಡಿನ ಹಾಗೂ ನಿರಂಕುಶವಾದ ಕ್ರಮವಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘‘ದಲಿತರು ಹಾಗೂ ಆದಿವಾಸಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಹೋರಾಟಗಾರರನ್ನು ಅಲ್ಪಸ್ವಲ್ಪ ಸಾಕ್ಷಾಧಾರಗಳೊಂದಿಗೆ ಬಂಧಿಸುವುದು ಇದು ಮೊದಲ ಸಲವೇನಲ್ಲ’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಹೇಳುತ್ತಾರೆ. ‘‘ಸರಕಾರವು ಜನತೆಯ ಅಭಿವ್ಯಕ್ತಿ ಸ್ವಾತಂತ್ರ, ಸಂಘಟಿತಗೊಳ್ಳುವ ಸ್ವಾತಂತ್ರ ಹಾಗೂ ಶಾಂತಿಯುತವಾಗಿ ಸಭೆ ನಡೆಸುವ ಸ್ವಾತಂತ್ರವನ್ನು ಒದಗಿಸುವ ಬದಲು ಅದು ಭಯದ ವಾತಾವರಣವನ್ನು ನಿರ್ಮಿಸುತ್ತಿದೆ’’ ಎಂದು ಅವರು ಅಭಿಪ್ರಾಯಿಸುತ್ತಾರೆ. ಯುರೋಪ್ ಒಕ್ಕೂಟವು ಪೊಲೀಸರು ಏಕಪಕ್ಷೀಯವಾಗಿ ನಡೆಸುವ ಬಂಧನಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಹಾಗೂ ಇಂತಹ ಬಂಧನ, ದಾಳಿ ಕಾರ್ಯಾಚರಣೆಗಳನ್ನು ಅದು ಖಂಡಿಸುತ್ತಿದೆ. ಆದರೆ ಇದೀಗ, ಮಾನವಹಕ್ಕುಗಳ ವಿಚಾರಗಳಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ಜೊತೆ ಸಹಕರಿಸುವ ವ್ಯಕ್ತಿಗಳ ವಿರುದ್ಧ ಬೆದರಿಕೆ ಹಾಗೂ ಕಠಿಣವಾದ ಪ್ರತೀಕಾರ ಕ್ರಮಗಳನ್ನು ಎಸಗುತ್ತಿರುವ ಜಗತ್ತಿನ ರಾಷ್ಟ್ರಗಳ ಪೈಕಿ ಭಾರತ ಕೂಡಾ ಹೆಸರಿಸಲ್ಪಟ್ಟಿದೆ.

 ದಲಿತ ಪರ ಹೋರಾಟಗಾರರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಸುಪ್ರೀಂಕೋರ್ಟ್ ನೇರವಾಗಿಯೇ ಸಂದೇಹಿಸಿದೆ. ಮಾನವಹಕ್ಕುಗಳ ಪ್ರತಿಪಾದಕರ ವಿರುದ್ಧ ಸರಕಾರ ದ್ವೇಷ ಸಾಧಿಸುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ ಹಾಗೂ ಹಾಲಿ ಕೇಂದ್ರ ಸರಕಾರದ ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯು ದೇಶವನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತಿದೆ ಎಂಬುದರೆಡೆಗೂ ಈ ಘಟನೆಯು ಬೆಟ್ಟು ಮಾಡಿ ತೋರಿಸುತ್ತದೆ. ಭೀಮಾಕೋರೆಗಾಂವ್ ಹಿಂಸಾಚಾರಕ್ಕೆ ಎಲ್ಗಾರ್ ಪರಿಷತ್‌ನ ಭಾಷಣಗಳೇ ಕಾರಣವೆಂದು ದೂಷಿಸಲಾಗುತ್ತದೆ. ಈ ಹೋರಾಟಗಾರರ ಪೈಕಿ ಹೆಚ್ಚಿನವರು ಎಲ್ಗಾರ್ ಪರಿಷತ್ ಸಭೆಯನ್ನು ಸಂಘಟಿಸುವಲ್ಲಿ ಯಾವುದೇ ರೀತಿಯ ಪಾತ್ರವನ್ನು ವಹಿಸಿರಲಿಲ್ಲ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಪಿ.ಬಿ.ಸಾವಂತ್ ಹಾಗೂ ಕೋಲ್ತೆ ಪಾಟೀಲ್ ಅವರು ಈಗಾಗಲೇ ತಾವು ಈ ಸಭೆಯ ಸಂಚಾಲಕರಾಗಿದ್ದೆವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿ ಮೂಡುವ ಪ್ರಶ್ನೆಯೇನೆಂದರೆ ಯಾಕೆ ಈ ಹೋರಾಟಗಾರರನ್ನು ಬಂಧಿಸಲಾಗಿತ್ತೆಂಬುದಾಗಿದೆ. ಪ್ರತಿಯೊಂದು ಭಿನ್ನಾಭಿಪ್ರಾಯಕ್ಕೂ ದೇಶವಿರೋಧಿಯೆಂಬ ಹಣೆಪಟ್ಟಿ ಕಟ್ಟುವುದು ಹಿಂದುತ್ವದ ಅಜೆಂಡಾದಿಂದ ನಿರ್ದೇಶಿಸಲ್ಪಟ್ಟಿರುವ ಈ ಸರಕಾರದ ಮುಖ್ಯಗುರಿಯಾಗಿರುವಂತೆ ಕಾಣುತ್ತದೆ. ಇದೇ ವೇಳೆ, ದಲಿತರು ತಮ್ಮ ಘನತೆಯನ್ನು ಸಮರ್ಥಿಸಿಕೊಳ್ಳಲು ಹಾಗೂ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಲು ನೆರವಾಗಲು ಯತ್ನಿಸುವವರನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.

 ಈ ಸರಕಾರವು ಅಧಿಕಾರಕ್ಕೇರುವುದರೊಂದಿಗೆ ದಲಿತರ ಹಕ್ಕುಗಳ ಪ್ರತಿಪಾದಕರನ್ನು ಗುರಿಯಿರಿಸಲಾಗುತ್ತದೆ. ಐಐಟಿ ಮದ್ರಾಸ್‌ನಲ್ಲಿ ‘ಪೆರಿಯಾರ್-ಅಂಬೇಡ್ಕರ್ ಅಧ್ಯಯನ ವೃತ್ತ’ದ ನಿಷೇಧದಿಂದ ಈ ಕೆಲಸವನ್ನು ಆರಂಭಿಸಿದ್ದ ಅವರು ಆನಂತರ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘವನ್ನು ಗುರಿಯಾಗಿರಿಸಿದರು. ಇದು ಅಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ‘ಸಾಂಸ್ಥಿಕ ಕೊಲೆ’ಗೆ ಕಾರಣವಾಯಿತು. ವೇಮುಲಾನ ಆತ್ಮಹತ್ಯೆ ಘಟನೆಯ ಬಳಿಕ ದೇಶಾದ್ಯಂತ ದಲಿತರು ಅಪಾರ ಸಂಖ್ಯೆಯಲ್ಲಿ ಸಿಡಿದೆದ್ದುದು, ದಲಿತ ಚಳವಳಿಯ ನೂತನ ಉದಯಕ್ಕೆ ಹಾದಿಮಾಡಿಕೊಟ್ಟಿತು. ಈ ಚಳವಳಿಗೆ ಇತರ ಸಾಮಾಜಿಕ ಗುಂಪುಗಳೂ ಧ್ವನಿಗೂಡಿಸಿದವು. ಬೀಫ್ ಸೇವನೆಯ ವಿಚಾರವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಿಡಲಾಯಿತು. ಗೋವಿನ ಚರ್ಮವನ್ನು ಸಾಗಾಟ ಮಾಡುತ್ತಿದ್ದಾರೆಂಬ ಆರೋಪದಲ್ಲಿ ನಾಲ್ವರು ದಲಿತಯುವಕರನ್ನು ನಗ್ನಗೊಳಿಸಿ ಅವರನ್ನು ನಿರ್ದಯವಾಗಿ ಥಳಿಸಿದ ಘಟನೆಯ ಬಳಿಕ ದೇಶದ ಇಡೀ ಸನ್ನಿವೇಶವು ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿತು. ದೇಶಾದ್ಯಂತ ದಲಿತರ ಅಸಮಾಧಾನವು ಇನ್ನೋರ್ವ ದಲಿತ ಯುವಕ ಜಿಗ್ನೇಶ್ ಮೇವಾನಿ ಆರಂಭಿಸಿದ ಪ್ರತಿಭಟನೆಗಳ ರೂಪದಲ್ಲಿ ಧ್ರುವೀಕರಣಗೊಂಡಿತು. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ಯಶಸ್ವಿಯಾಗಿ ಪ್ರತಿಭಟನೆಗಳನ್ನು ಸಂಘಟಿಸುವ ಮೂಲಕ ಅವರು ದಲಿತರ ಧ್ವನಿಯಾಗಿ ಮೂಡಿಬಂದರು. ಜಿಗ್ನೇಶ್ ಅವರು ದಲಿತರ ಅಸ್ಮಿತೆ ಹಾಗೂ ಘನತೆಯನ್ನು ಅವರು ದೇಶಾದ್ಯಂತ ಎದುರಿಸುತ್ತಿರುವ ಅತಿ ಮುಖ್ಯ ಸಮಸ್ಯೆಯಾದ ಭೂಮಿಯ ಹಕ್ಕಿನ ಜೊತೆ ಸಂಯೋಜನೆಗೊಳಿಸಲು ಯತ್ನಿಸಿದರು.

  ರಾಮದೇಗುಲ, ಗೋವು-ಬೀಫ್, ಲವ್‌ಜಿಹಾದ್ ಹಾಗೂ ಘರ್‌ವಾಪಸಿಯಂತಹ ವಿಷಯಗಳನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತ ಮುಸ್ಲಿಮರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲು ಹಾಲಿ ಸರಕಾರದ ರಾಜಕೀಯ ಅಜೆಂಡಾ ಪ್ರಯತ್ನಿಸುತ್ತಿದೆ. ಮುಸ್ಲಿಮರು ಹಾಗೂ ಕ್ರೈಸ್ತರಿಗೆ ವಿದೇಶಿಯರೆಂಬ ಹಣೆಪಟ್ಟಿ ಕಟ್ಟುವುದು ಹಾಗೂ ಅದರಲ್ಲೂ ಮುಸ್ಲಿಮರನ್ನು ದೇಶವಿರೋಧಿ ಗಳೆಂಬಂತೆ ಬಿಂಬಿಸುವುದು ಅವರ ರಾಜಕೀಯದ ತಂತ್ರಗಾರಿಕೆಯಾಗಿದೆ. ದಲಿತರ ಬಗ್ಗೆ ಹೇಳುವುದಾದರೆ, ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಂಘಪರಿವಾರವು ಹಲವಾರು ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ. ‘ಸಾಮಾಜಿಕ್ ಸಮ್ರಷ್ಟ ಮಂಚ್’(ಸಾಮಾಜಿಕ ಸೌಹಾರ್ದ ವೇದಿಕೆ)ನ ಸ್ಥಾಪನೆ ಈ ನಿಟ್ಟಿನಲ್ಲಿ ಅದು ನಡೆಸಿದ ಪ್ರಮುಖ ಪ್ರಯತ್ನವಾಗಿದೆ. ವಿವಿಧ ಜಾತಿಗಳ ನಡುವೆ ಸೌಹಾರ್ದವನ್ನು ಉತ್ತೇಜಿಸುವುದೇ ಈ ವೇದಿಕೆಯ ಮುಖ್ಯ ಗುರಿಯಾಗಿದೆ. ಇದೇ ವೇಳೆ, ಮುಸ್ಲಿಂ ಅತಿಕ್ರಮಣಕಾರರು ಮತಾಂತರಕ್ಕೆ ಯತ್ನಿಸಿದ್ದರಿಂದಲೇ ಜಾತಿ ಅಸಮಾನತೆ ಸೃಷ್ಟಿಯಾಯಿತೆಂದು ಆರೆಸ್ಸೆಸ್ ಪ್ರತಿಪಾದಿಸುತ್ತಾ ಬಂದಿದೆ. ಅಸಮಾನತೆಯನ್ನು ಬಚ್ಚಿಟ್ಟುಕೊಳ್ಳಲಾದ ಸಿದ್ಧಾಂತದೊಳಗೆ ದಲಿತರನ್ನು ಹಾಗೂ ಆದಿವಾಸಿಗಳನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಹಿಂದೂ ರಾಷ್ಟ್ರೀಯತಾವಾದಕ್ಕೆ ಬೆಂಬಲವನ್ನು ಪಡೆಯವುದಕ್ಕೋಸ್ಕರವಾಗಿ ರಾಮ್‌ವಿಲಾಸ್ ಪಾಸ್ವಾನ್, ರಾಮದಾಸ್ ಅಠಾವಳೆ ಹಾಗೂ ಉದಿತ್‌ರಾಜ್ ಮುಂತಾದವರಿಗೆ ಅಧಿಕಾರದ ಹುದ್ದೆಗಳ ಆಮಿಷವೊಡ್ಡಲಾಯಿತು. ಸಾಂಸ್ಕೃತಿಕ ಮಟ್ಟದಲ್ಲಿ ಸುಹೇಲ್‌ದೇವ್‌ರಂತಹ ಐತಿಹಾಸಿಕ ವ್ಯಕ್ತಿಗಳನ್ನು ವಿದೇಶಿ ಮುಸ್ಲಿಮರ ವಿರುದ್ಧ ಹೋರಾಡಿದ ಹಿಂದೂ ವೀರರೆಂಬ ಹಾಗೆ ಬಿಂಬಿಸಲಾಗುತ್ತಿದೆ.

 ಆದಾಗ್ಯೂ, ಬಂಡಾಯದ ಬಿಸಿಗಾಳಿ ಹೊರಹೊಮ್ಮುತ್ತಿದೆ. ದಲಿತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ದಲಿತರ ಸಮಾನತೆ ಹಾಗೂ ಘನತೆಯನ್ನು ಕಡೆಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸರು ಹತಾಶರಾಗಿ, ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನೆರವಾದ ಸಾಮಾಜಿಕ ಹೋರಾಟಗಾರರು/ವಿದ್ವಾಂಸರ ಮೇಲೆ ಸುಳ್ಳು ದೋಷಾರೋಪ ಹೊರಿಸಲಾಗುತ್ತಿದೆ. ಭೀಮಾಕೋರೆಗಾಂವ್‌ನಲ್ಲಿ ಇಬ್ಬರು ನಿವೃತ್ತ ನ್ಯಾಯಾಧೀಶರು ಆಯೋಜಿಸಿದ್ದ ಎಲ್ಗಾರ್ ಪರಿಷತ್‌ನ ಸಭೆಗೆ ಸಂಬಂಧಿಸಿ ಅವರನ್ನು ಸಿಲುಕಿಸಲು ಈ ಯತ್ನಗಳು ನಡೆಯುತ್ತಿವೆ. ರೋಮಿಲಾ ಥಾಪರ್ ಅವರಂತಹ ಜಾಗೃತ ನಾಗರಿಕರು, ಈ ವಿವೇಚನಾರಹಿತ ಪೊಲೀಸ್ ಕಾರ್ಯಾಚರಣೆಗೆ ತಡೆಯೊಡ್ಡುವ ಮೂಲಕ ಪ್ರಜಾತಾಂತ್ರಿಕ ತತ್ವಗಳನ್ನು ರಕ್ಷಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡುವ ಮೂಲಕ ದೇಶಕ್ಕೆ ನಿಷ್ಠಾವಂತ ಸೇವೆಯನ್ನು ಸಲ್ಲಿಸಿದ್ದಾರೆ. ಶೋಷಿತ ವರ್ಗಗಳ ಹಕ್ಕುಗಳನ್ನು ತಾನು ರಕ್ಷಿಸಬಲ್ಲೆನೆಂಬುದನ್ನು ಸುಪ್ರೀಂಕೋರ್ಟ್ ಮತ್ತೊಮ್ಮೆ ಸಾಬೀತುಪಡಿಸಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News