ಏಷ್ಯಾ ಕಪ್ ಫೈನಲ್: ಭಾರತಕ್ಕೆ ಬಾಂಗ್ಲಾ ಎದುರಾಳಿ

Update: 2018-09-27 04:06 GMT

ಅಬುಧಾಬಿ, ಸೆ. 27: ಮುಶ್ಫಿಕರ್ ರಹೀಂ (99) ಮತ್ತು ಮುಹಮ್ಮದ್ ಮಿಥುನ್ (60) ಸಾಹಸದಿಂದ ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು 37 ರನ್ನುಗಳಿಂದ ಬಗ್ಗುಬಡಿದ ಬಾಂಗ್ಲಾದೇಶ ಫೈನಲ್ ತಲುಪಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಸಾಧಾರಣ ಮೊತ್ತ 239 ರನ್ ಗಳಿಸಿದರೂ, ಪರಿಣಾಮಕಾರಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿತು.

ಏಕದಿನ ಪಂದ್ಯದಲ್ಲಿ 30ನೇ ಅರ್ಧಶತಕ ಗಳಿಸಿದ ಮುಶ್ಫಿಕರ್, ತಮ್ಮ ಏಳನೇ ಶತಕ ಗಳಿಸಲು ಒಂದು ರನ್ ಬೇಕಿದ್ದಾಗ ಔಟ್ ಆದರು. ಐದು ಓವರ್‌ಗಳಲ್ಲಿ 12 ರನ್ನುಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾತಂಡಕ್ಕೆ ಮುಶ್ಫಿಕರ್- ಮಿಥುನ್ ಜೋಡಿ 144 ರನ್ನುಗಳನ್ನು ನಾಲ್ಕನೇ ವಿಕೆಟ್‌ನಲ್ಲಿ ಸೇರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಪಾಕಿಸ್ತಾನ ಪರ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ (83) ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗದೇ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲು ಸಾಧ್ಯವಾಯಿತು. ಶುಕ್ರವಾರ ದುಬೈನಲ್ಲಿ ನಡೆಯುವ ಫೈನಲ್‌ನಲ್ಲಿ ಬಾಂಗ್ಲಾದೇಶ, ಭಾರತವನ್ನು ಎದುರಿಸಲಿದೆ.

ಬಾಂಗ್ಲಾದೇಶದಂತೆ ಪಾಕಿಸ್ತಾನದ ಆರಂಭ ಕೂಡಾ ತೀರಾ ಕೆಟ್ಟದಾಗಿತ್ತು. 3.3 ಓವರ್‌ಗಳಲ್ಲಿ 18 ರನ್ನುಗಳಿಗೆ ಪಾಕಿಸ್ತಾನದ ಮೂವರು ಆಟಗಾರರು ಪೆವಿಲಿಯನ್ ತಲುಪಿದ್ದರು. ಆದರೆ ಶೋಯಬ್ ಮಲಿಕ್ (30) ಮತ್ತು ಅಸೀಫ್ ಅಲಿ (31) ಅವರ ಉಪಯುಕ್ತ ಜತೆಯಾಟದಲ್ಲಿ ಪಾಲ್ಗೊಂಡ ಇಮಾಮ್ ತಂಡವನ್ನು ದಡ ಸೇರಿಸಲು ಪ್ರಯತ್ನಿಸಿದರು. ಆದರೆ ಛಲ ಬಿಡದೆ ಸರ್ವಾಂಗೀಣ ಪ್ರದರ್ಶನ ನೀಡಿದ ಬಾಂಗ್ಲಾ ತಂಡ ಅರ್ಹ ಜಯಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News