ರನ್-ವೇ ದಾಟಿ ಸಮುದ್ರಕ್ಕೆ ಅಪ್ಪಳಿಸಿದ ವಿಮಾನ: ಪ್ರಯಾಣಿಕರು ಪಾರು

Update: 2018-09-28 10:12 GMT

ಹೊಸದಿಲ್ಲಿ,ಸೆ.28 : ಒಟ್ಟು 47 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರವಾದ ಮೈಕ್ರೊನೇಶಿಯಾದ ಛುಕ್ ಎಂಬಲ್ಲಿ ರನ್-ವೇಯಿಂದ ಹೊರ ದಾಟಿ ಸಮುದ್ರಕ್ಕೆ ಅಪ್ಪಳಿಸಿದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸಣ್ಣ ಬೋಟುಗಳ ಸಹಾಯದಿಂದ ರಕ್ಷಿಸಲಾಗಿದ್ದು ಯಾರಿಗೂ ಯಾವುದೇ ಗಂಭೀರ ಗಾಯಗಳುಂಟಾಗಿಲ್ಲ. ಅಪಘಾತಕ್ಕೀಡಾದ ಬೋಯಿಂಗ್ 737 ವಿಮಾನ ಪಪುವಾ ನ್ಯೂ ಗಿನಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಏರ್ ನಿಯುಗಿನಿಗೆ ಸೇರಿದೆ. ಘಟನೆಗೆ ಕಾರಣವೇನೆಂದು ತನಿಖೆ ನಡೆಸುವುದಾಗಿ ಸಂಸ್ಥೆ ಹೇಳಿದೆ.

ವಿಮಾನದಲ್ಲಿ 36 ಪ್ರಯಾಣಿಕರಿದ್ದರೆ 11 ಮಂದಿ ವಿಮಾನ ಸಿಬ್ಬಂದಿಯಿದ್ದರು. ವಿಮಾನ ಭೂಸ್ಪರ್ಶ ಮಾಡುತ್ತಿದ್ದಾಗ ಸ್ವಲ್ಪ ಎಡವಿದ ಪರಿಣಾಮ ಅಪಘಾತ ಸಂಭವಿಸಿದೆ. ಆ ವಿಮಾನ ನಿಲ್ದಾಣದ ರನ್-ವೇ 6,013 ಅಡಿ ಉದ್ದವಿದೆ. ಪ್ರಯಾಣಿಕರೆಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತಕ್ಕೀಡಾದ ಈ ವಿಮಾನವು ಪೊಹ್ನೆಪೀ, ಮೈಕ್ರೊನೇಶಿಯ ಹಾಗೂ ಪೋರ್ಟ್ ಮೊರೆಸ್‍ಬೈ ನಡುವೆ ಹಾರಾಟ ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News