ಬಿಬಿಎಂಪಿ ಫಲಿತಾಂಶ ಮೈತ್ರಿ ಸರಕಾರ ಸುಭದ್ರವಾಗಿರುವುದಕ್ಕೆ ಸಾಕ್ಷಿ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-09-28 12:20 GMT

ಬೆಂಗಳೂರು, ಸೆ. 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಆಗಿ ಕಾಂಗ್ರೆಸ್ ಹಾಗೂ ಉಪಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿಯ ಗೆಲುವು ರಾಜ್ಯದ ಮೈತ್ರಿ ಸರಕಾರ ಸದೃಢವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಶುಕ್ರವಾರ ನೂತನ ಮೇಯರ್ ಆಗಿ ಆಯ್ಕೆಯಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪಮೇಯರ್ ರಮೀಳಾ ಉಮಾಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ ಮೇಯರ್‌ಗೆ 131 ಹಾಗೂ ಉಪಮೇಯರ್‌ಗೆ 129 ಮತಗಳು ಪಡೆದು ಗದ್ದುಗೆ ಹಿಡಿದಿದ್ದೇವೆ. ಈ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ ಎಂದರು.

ಬಿಬಿಎಂಪಿಯ ಪಕ್ಷೇತರ ಅಭ್ಯರ್ಥಿಗಳನ್ನು ಹೈಜಾಕ್ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡಿದರೂ ಕಾಂಗ್ರೆಸ್-ಜೆಡಿಎಸ್‌ಗೆ ಗೆಲುವು ಸಿಕ್ಕಿದೆ. ಮೇಯರ್ ಮತ್ತು ಉಪಮೇಯರ್ ಗೆಲುವಿಗೆ ನಾವು ಯಾವುದೇ ಪೊಲೀಸ್ ಫೋರ್ಸ್ ಅನ್ನೂ ಬಳಸಿಲ್ಲ. ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ ಎಂದು ಪರಮೇಶ್ವರ್ ಹೇಳಿದರು.

ಬಿಬಿಎಂಪಿ ನೂತನ ಮೇಯರ್‌ಆಗಿ ಆಯ್ಕೆಯಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ರಮೀಳಾ ಉಮಾಶಂಕರ್ ಅವರಿಗೆ ಅಭಿನಂದನೆಗಳು. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಗೆಲುವು ಒಲಿದಿದೆ. ಇದರಿಂದ ಮೈತ್ರಿ ಸರಕಾರದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುವ ಭರವಸೆ ನನಗಿದೆ’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕೈಹಾಕಿ ಮುಖಭಂಗ ಅನುಭವಿಸಿದ್ದ ಬಿಜೆಪಿ, ಬಿಬಿಎಂಪಿ ಮೇಯರ್ ಚುನಾವಣೆಯ ‘ಆಪರೇಷನ್ ಕಾರ್ಪೋರೇಟರ್ಸ್‌’ನಲ್ಲೂ ವಿಫಲವಾಗಿದೆ. ಎಲ್ಲರ ಸಹಮತದಿಂದ ಮೇಯರ್, ಉಪ ಮೇಯರ್ ಆಯ್ಕೆ ಆಗಿದೆ. ಕೌನ್ಸಿಲ್ ಒಳಗೆ ಜೆಡಿಎಸ್ ಸದಸ್ಯರಿಗೆ ಒತ್ತಡ ತರುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ನಮಗೆ ದಾದಾಗಿರಿ ಮಾಡುವ ಅಗತ್ಯವಿಲ್ಲ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News