ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಸಚಿವೆ ಜಯಮಾಲಾ
ಬೆಂಗಳೂರು, ಸೆ. 28: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸುಪ್ರೀಂ ಕೋರ್ಟ್ ಪುರುಷ-ಮಹಿಳೆ ಸಮಾನರೆಂಬ ತೀರ್ಪು ನೀಡಿರುವುದು ಐತಿಹಾಸಿಕ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಹೆಣ್ಣು ಮಕ್ಕಳಿಗೊಂದು ನ್ಯಾಯ ಸಿಕ್ಕಂತಾಗಿದೆ. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿ ಕೊಟ್ಟ ಸಂವಿಧಾನಕ್ಕೆ ನಾವು ಚಿರಋಣಿಗಳು ಎಂದು ಬಣ್ಣಿಸಿದರು.
ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ನಮ್ಮ ಕೃತಜ್ಞತೆ ಸಲ್ಲಿಸುತ್ತೇನೆ. ಈ ಹಿಂದೆ ಆದ ಘಟನೆಯಿಂದ ತನಗೆ ಅತೀವ ನೋವಾಗಿತ್ತು. ಇಡೀ ಹೆಣ್ಣು ಕುಲಕ್ಕೇ ನೋವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಎಲ್ಲ ನೋವನ್ನು ಮರೆಸಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶ ಸಂಬಂಧ ನಮಗೆ(ಮಹಿಳೆಯರಿಗೆ) ಜಯ ಸಿಗುವ ವಿಶ್ವಾಸವಿತ್ತು. ಅದು ಇದೀಗ ನಿಜವಾಗಿದೆ ಎಂದರು.