ಅಂಬೇಡ್ಕರ್-ಭಗತ್‌ಸಿಂಗ್ ಕನಸಿನ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್
ಬೆಂಗಳೂರು, ಸೆ.28: ದಲಿತ, ರೈತ ಹಾಗೂ ಕಾರ್ಮಿಕ ವಿರೋಧಿಯಾಗಿರುವ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕ್ರಾಂತಿಕಾರಿ ಭಗತ್ ಸಿಂಗ್ ಕನಸು ಕಂಡಂತಹ ಭಾರತವನ್ನು ನಿರ್ಮಿಸಲು ಒಂದಾಗಿ ಶ್ರಮಿಸಬೇಕಿದೆ ಎಂದು ಸಿಪಿಐ(ಎಂಎಲ್)ನ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ತಿಳಿಸಿದರು.
ಶುಕ್ರವಾರ ಸಿಪಿಐ(ಎಂಎಲ್) ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಶಹೀದ್ ಭಗತ್‌ಸಿಂಗ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕನಸಿನ ಭಾರತ ಕಟ್ಟೋಣವೆಂಬ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತವು ಕಾರ್ಮಿಕ ಕಾನೂನುಗಳನ್ನು ನಿರ್ಮೂಲನೆ ಮಾಡಿ, ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿ ಮಾಡುತ್ತಿದೆ. ದೇಶದ ಶೇ.90ರಷ್ಟಿರುವ ಜನಸಾಮಾನ್ಯರ ವಿರುದ್ಧ ಕೇಂದ್ರ ಸರಕಾರ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಇವರ ಜನವಿರೋಧಿ ನೀತಿಗಳನ್ನು ಜನತೆಗೆ ಅರ್ಥ ಮಾಡುವ ಕೆಲಸವಾಗಬೇಕಿದೆ ಎಂದು ಅವರು ಹೇಳಿದರು.
ಕಳೆದ ನಾಲ್ಕು ವರ್ಷದಿಂದ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ಸಂಘಪರಿವಾರದ ಸಂಘಟನೆಗಳು ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಸಂವಿಧಾನವನ್ನು ಬಹಿರಂಗವಾಗಿ ಸುಡಲಾಗುತ್ತಿದೆ. ಸಂಘಪರಿವಾರ ನಡೆಸುತ್ತಿರುವ ಇಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳಿಗೆ ಕೇಂದ್ರ ಸರಕಾರ ಬಹಿರಂಗವಾಗಿ ಪ್ರೋತ್ಸಾಹಿಸುತ್ತಿದೆ. ಬಿಜೆಪಿಗೆ ದೇಶವನ್ನು ಮುನ್ನಡೆಸಲು ಯಾವುದೆ ಅರ್ಹತೆಯಿಲ್ಲವೆಂದು ಅವರು ಹೇಳಿದರು.
ದೇಶದಲ್ಲಿ ಜನವಿರೋಧಿ ಸರಕಾರ ಇರುವುದರಿಂದ ಸಂವಿಧಾನದ ಮೇಲೆ ಆಶಯ ಹೊಂದಿರುವವರ ಜವಾಬ್ದಾರಿ ಹೆಚ್ಚಿದೆ. ಸಂಘಪರಿವಾರದ ಹಿಂಸಾಕೃತ್ಯಗಳು ಹಾಗೂ ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಆ ಮೂಲಕ ಕಾರ್ಮಿಕರು, ದಲಿತರು ಒಂದಾಗಿ ದೇಶವನ್ನು ಕಟ್ಟಬೇಕೆಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.