×
Ad

ರೈತರಿಗೆ ಉಚಿತ ಸಸಿ ವಿತರಣೆ, ಸಸಿಗೆ ನೂರು ರೂ. ಪ್ರೋತ್ಸಾಹಧನ: ಅರಣ್ಯ ಸಚಿವ ಶಂಕರ್

Update: 2018-10-01 19:19 IST

ಬೆಂಗಳೂರು, ಅ.1 ಪರಿಸರ ಸಂರಕ್ಷಣೆ ದೃಷ್ಟಿಯಿಂದ ರೈತರು ಎಕರೆಗೆ 20 ಸಸಿಗಳನ್ನು ನೆಡಲು ಇಲಾಖೆ ಒಂದು ಸಸಿಗೆ ನೂರು ರೂ.ನಂತೆ ಪ್ರೋತ್ಸಾಹ ಧನ ನೀಡಲಿದ್ದು, ಅರ್ಜಿ ಸಲ್ಲಿಸಿದ ರೈತರಿಗೆ ಉಚಿತವಾಗಿ ಇಲಾಖೆಯಿಂದ ಸಸಿ ವಿತರಣೆ ಮಾಡಲಿದೆ ಎಂದು ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಐದೂವರೆ ಕೋಟಿ ಮರಗಳನ್ನು ಬೆಳೆಸಬೇಕೆನ್ನುವ ಗುರಿಯನ್ನು ಇದೀಗ 10 ಕೋಟಿಗೇರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪರಿಸರ ಮಾಲಿನ್ಯ ತಡೆಗೆ ಈಗಾಗಲೇ ಕ್ರಮ ವಹಿಸಲಾಗಿದೆ. ಹಸಿರೀಕರಣವನ್ನು ಹೆಚ್ಚಿಸಲು ಪ್ಯಾರಚೂಟ್ ಮೂಲಕ ಬೀಜದುಂಡೆ ಬಿತ್ತನೆ ಕಾರ್ಯ ಕೈಗೊಳ್ಳಲಾಗುವುದು ಎಂದ ಅವರು, ಕೇವಲ ಮೂರು ದಿನದ ಅಭಿಯಾನದಲ್ಲಿ 10 ಲಕ್ಷ ಮರ ನೆಡಲಾಗಿದೆ ಎಂದು ಅವರು ತಿಳಿಸಿದರು.

ಯತ್ರೋಪಕರಣ ಖರೀದಿ: ಪರಿಸರ ಮಾಲಿನ್ಯ ತಪಾಸಣೆಗೆ 97ಕೋಟಿ ರೂ. ವೆಚ್ಚದಲ್ಲಿ ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದ ಅವರು, ಮಾಲಿನ್ಯ ತಡೆ ಜತೆಗೆ ರಾಜ್ಯದಲ್ಲಿ ಹಸಿರೀಕರಣ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.

ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ, ವ್ಯಾಪಕವಾಗಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಅನುಷ್ಠಾನಕ್ಕೆ ಕೊಂಚ ಕಾಲಾವಕಾಶ ಅಗತ್ಯ. ಜನರು ಸರಕಾರದೊಂದಿಗೆ ಕೈಜೋಡಿಸಬೇಕು. ಪ್ಲಾಸ್ಟಿಕ್ ನಿಷೇಧ ಕಾನೂನು ಅನುಷ್ಠಾನ ಸಂಬಂಧ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ನನ್ನ ಪುತ್ರನೂ ಇಂಜಿನಿಯರ್: ಸರ್ ಎಂ.ವಿಶ್ವೇಶ್ವರಯ್ಯನವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು, ನನ್ನ ಪುತ್ರ ಸೆಪ್ಟಂಬರ್ 15ರಂದೇ ಜನಿಸಿದ್ದು, ಆತನೂ ಇಂಜಿನಿಯರ್ ಆಗಿದ್ದಾನೆ. ಹೀಗಿರುವಾಗಿ ನನಗೆ ವಿಶ್ವೇಶ್ವರಯ್ಯನವರ ಬಗ್ಗೆ ಗೊತ್ತಿಲ್ಲ ಎಂಬುದು ತಪ್ಪು. ಈ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ 5 ವರ್ಷ ಸುಭದ್ರವಾಗಿರಲಿದೆ. ‘ನಾನು ಇವತ್ತು ಇಲ್ಲಿ, ನಾಳೆ ಇನ್ನೆಲ್ಲ್ಲೊ’ ಎಂದು ಎಲ್ಲೂ ಮತ್ತು ಎಂದೂ ಹೇಳಿಕೆ ನೀಡಿಲ್ಲ. ನನ್ನಿಂದ ಮೈತ್ರಿ ಸರಕಾರಕ್ಕೆ ಎಂದೂ ಯಾವುದೇ ಅಡ್ಡಿ ಇಲ್ಲ. ಸರಕಾರದ ಜತೆ ನಾನಿದ್ದೇನೆ’

-ಶಂಕರ್, ಅರಣ್ಯ ಸಚಿವ

ಶೇ.2ರಷ್ಟು ಹಸಿರು ಪ್ರಮಾಣ ಹೆಚ್ಚಳ:

ಸರಕಾರ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಪರಿಣಾಮ ರಾಜ್ಯದಲ್ಲಿ ಶೇ.2ರಷ್ಟು ಹಸಿರಿನ ಪ್ರಮಾಣ ಹೆಚ್ಚಳವಾಗಿದೆ. ಈ ವರ್ಷ ಸಸಿ ನೆಡಲು 10 ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ.

-ಶಂಕರ್, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News