ಕೆಪಿಎಸ್ಸಿಯ ಸಣ್ಣ ಲೋಪ ಆಡಳಿತ ವ್ಯವಸ್ಥೆಯನ್ನೇ ಕುಂಠಿತಗೊಳಿಸುತ್ತದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-10-01 13:51 GMT

ಬೆಂಗಳೂರು, ಅ. 1: ಕರ್ನಾಟಕ ಲೋಕಸೇವಾ ಆಯೋಗವು ಆಡಳಿತಾತ್ಮಕ ವ್ಯವಸ್ಥೆಯ ಅಂತಃಶಕ್ತಿಯನ್ನು ಕಾಪಾಡುತ್ತಿರುವ ಸಂಸ್ಥೆಯಾಗಿದ್ದು, ಆಡಳಿತ ವ್ಯವಸ್ಥೆಯ ಪ್ರಾಣ ಸ್ವರೂಪದಂತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್. ಜಿ.ಸಿದ್ಧರಾಮಯ್ಯ ಹೇಳಿದ್ದಾರೆ.

ಸೋಮವಾರ ಕೆಪಿಎಸ್ಸಿ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಆಯೋಗದಿಂದ ಸಣ್ಣ ಲೋಪವುಂಟಾದರೂ ಇಡೀ ಆಡಳಿತ ವ್ಯವಸ್ಥೆಯೇ ಕುಂಠಿತವಾಗುತ್ತದೆ. ಆಡಳಿತಾತ್ಮಕವಾಗಿ ಯಾವುದೇ ಕುಂದುಂಟಾದರೂ ಜನರು ಆಯೋಗದ ಕಡೆಗೇ ಬೆರಳು ತೋರುತ್ತಾರಾದ್ದರಿಂದ ಆಯೋಗವು ಹೆಚ್ಚು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ದೇವರಾಜ ಅರಸು ಅವರು ಆಯೋಗಕ್ಕೆ ಬಲ ನೀಡಿ ಕೇವಲ ಎ ಮತ್ತು ಬಿ ವೃಂದದ ನೇಮಕಾತಿಗೆ ಸೀಮಿತವಾಗಿದ್ದ ಆಯೋಗಕ್ಕೆ ‘ಸಿ’ ವೃಂದದ ನೇಮಕಾತಿಗೂ ವಿಸ್ತರಿಸಿದ್ದು ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಕಾರಣರಾದರು. ಆಯೋಗದಿಂದ ಸಿದ್ಧಪಡಿಸಿ ನೀಡುವ ಆಯ್ಕೆಪಟ್ಟಿಯನುಸಾರ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಆಯೋಗದ ಆಯ್ಕೆ ಪಟ್ಟಿಯನ್ನು ಹಲವು ಬಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಪ್ರಸಂಗಗಳು ನಮ್ಮ ಕಣ್ಣುಮುಂದಿದೆ. ಅಂತಹ ಸಂದರ್ಭಗಳಲ್ಲಿ ಹಲವು ವರ್ಷಗಳ ಕಾಲ ಸದರಿ ಹುದ್ದೆಗಳು ಖಾಲಿಯಿದ್ದು ಆಡಳಿತ ವ್ಯವಸ್ಥೆ ಕುಂಟುವಂತೆ ಮಾಡುತ್ತಿದೆ ಎಂದರು.

ಈ ಹಿನ್ನೆಲೆಯಲ್ಲಿ ಸತ್ಯಶುದ್ಧವಾದ ಆಡಳಿತವನ್ನು ನೀಡುವ ದೃಷ್ಟಿಯಿಂದ ಲೋಕಸೇವಾ ಆಯೋಗ ಈ ಎಲ್ಲಾ ಅಂಶಗಳನ್ನೂ ಪರಿಗಣಿಸಿ ಹೆಚ್ಚು ಕಾರ್ಯಬದ್ಧತೆ ತೋರಬೇಕೆಂದು ಹೇಳಿದರು. ಸಿ ವೃಂದದ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡದ ಮಕ್ಕಳಿಗೆ ಅನ್ಯಾಯವಾಗುವ ರೀತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ರೂಪಿಸಲಾಗುತ್ತಿದೆ ಎಂದರು.

ವಸತಿ ಶಾಲೆಗಳಿಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಹುದ್ದೆಗೆ ಇಂಗ್ಲಿಷ್ ಮಾಧ್ಯಮವನ್ನು ಕಡ್ಡಾಯ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಕನ್ನಡ ಬಿಎ/ಎಂಎ ಪದವಿ ಪಡೆದವರು ಆಡಳಿತಾತ್ಮಕವಾಗಿ ಪ್ರಾಂಶುಪಾಲರ ಹುದ್ದೆ ನಿಭಾಯಿಸಲು ಅನರ್ಹರೇ ಎಂದು ಪ್ರಶ್ನಿಸಿದರು.

ಈ ರೀತಿಯ ಧೋರಣೆಯನ್ನು ಮೊದಲು ಆಯೋಗ ತಿದ್ದಿಕೊಳ್ಳಬೇಕು. ಆಯೋಗದ ಅಂತರ್ಜಾಲ ತಾಣವನ್ನು ಸಂಪೂರ್ಣ ಕನ್ನಡೀಕರಣಗೊಳಿಸುವ ಜೊತೆಗೆ ಅರ್ಜಿಗಳು, ಮೊಹರುಗಳು, ನಮೂನೆಗಳಂತೆಯೇ ಆನ್‌ಲೈನ್ ಅರ್ಜಿಗಳನ್ನೂ ಕನ್ನಡದಲ್ಲಿಯೇ ನೀಡುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ಆರ್.ಆರ್.ಜನ್ನು, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಸದಸ್ಯರಾದ ಪ್ರಭಾಕರ್ ಪಟೇಲ್, ಗಿರೀಶ್ ಪಟೇಲ್, ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಆರಾಧ್ಯ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News