ಜಿಮ್ನಾಸ್ಟಿಕ್ ಆಟಗಾರ್ತಿಗೆ ಮಾಜಿ ತರಬೇತುದಾರರಿಂದ ಕಿರುಕುಳ: ದೂರು ದಾಖಲು
ಬೆಂಗಳೂರು, ಅ.1: ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬಾಕೆಗೆ ಮಾಜಿ ತರಬೇತುದಾರ ಕಿರುಕುಳ ನೀಡಿರುವ ಆರೋಪ ಸಂಬಂಧ ಇಲ್ಲಿನ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಜಿ ತರಬೇತುದಾರ ಕಿಣ್ ರಾಜ್ ಹಾಗೂ ಧನುಷ್ ಎಂಬುವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಜಿಮ್ನಾಸ್ಟಿಕ್ ಆಟಗಾರ್ತಿ ಈ ಹಿಂದೆ ಕಿರಣ್‌ರಾಜ್ ಬಳಿ ತರಬೇತಿ ಪಡೆಯುತ್ತಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಆತನಿಂದ ದೂರ ಉಳಿದಿದ್ದಳು. ದೂರಾದ ಬಳಿಕವೂ ಆಕೆ ಉತ್ತಮ ಪ್ರದರ್ಶನ ಮುಂದುವರೆಸಿದ್ದಳು. ಅದೇ ಕಾರಣಕ್ಕೆ ಆಕೆಯ ಕುರಿತು ಇಲ್ಲ ಸಲ್ಲದ ಆರೋಪ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆ ಮಾಡಿದ್ದು, ಮೋಸಗಾರ್ತಿ ಎಂದೆಲ್ಲಾ ಆರೋಪಿಸಿ ಆಕೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಟಗಾರ್ತಿ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ, ರಾಜ್ಯ ಮಟ್ಟದಲ್ಲಿ ಹತ್ತಕ್ಕೂ ಹೆಚ್ಚು ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದ್ದು, ರಾಜ್ಯ ಜಿಮ್ನಾಸ್ಟಿಕ್ ವಲಯದಲ್ಲಿ ಕಿರಿಯ ದೀಪಾ ಕರ್ಮಾಕರ್ ಎಂದೇ ಖ್ಯಾತಿ ಪಡೆದಿದ್ದಾರೆ.
ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆಟಗಾರ್ತಿಯ ತಂದೆ ಶ್ರೀನಿವಾಸ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.