ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿದೆ: ಹಿರಿಯ ಪತ್ರಕರ್ತ ಹರಿಶ್ಚಂದ್ರ ಭಟ್

Update: 2018-10-01 14:17 GMT

ಬೆಂಗಳೂರು, ಸೆ.30: ಇಂದಿನ ಚುನಾವಣಾ ಪದ್ಧತಿ ಹದಗೆಟ್ಟಿದ್ದು, ರಾಜಕೀಯ ವ್ಯವಸ್ಥೆ ಭ್ರಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಬಿ.ಹರಿಶ್ಚಂದ್ರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸೋಮವಾರ ನಗರದ ಜೆಡಿಯು ಕಚೇರಿಯಲ್ಲಿ ಆಯೋಜಿಸಿದ್ದ ಜೆ.ಎಚ್.ಪಟೇಲ್‌ರ ಜನ್ಮದಿನೋತ್ಸವ ಹಾಗೂ ಭಾರತದಲ್ಲಿ ಚುನಾವಣಾ ಸುಧಾರಣೆ ವಿಷಯದ ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮದೇ ಆದ ರಾಜಕೀಯ ಧರ್ಮವನ್ನು ಅನುಸರಿಸುತ್ತಿದ್ದರು. ಆದರೆ, ಇಂದಿನ ವ್ಯವಸ್ಥೆಯಲ್ಲಿ ಎಲ್ಲವೂ ಭ್ರಷ್ಟಗೊಂಡಿದೆ ಎಂದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊದಲ ಬಾರಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರ ಸರಕಾರಕ್ಕೆ ಸ್ಪಷ್ಟ ಬಹುಮತವಿರಲಿಲ್ಲ. ಆದರೂ, ಸುಭದ್ರ ಸರಕಾರವನ್ನು ನಡೆಸಿದರು. ಆದರೆ, ಇಂದಿನ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದೆ. ಜನರ ಸೇವೆ ಮಾಡುವ ಬದಲಿಗೆ ಸರಕಾರದ ಪ್ರತಿನಿಧಿಗಳು ಶಾಸಕರನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಜನಪ್ರತಿನಿಧಿಗಳು ಒಂದು ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡ ನಂತರ ಕಷ್ಟ, ನಷ್ಟ, ಸುಖ ಎಲ್ಲವನ್ನೂ ಅಲ್ಲೇ ಅನುಭವಿಸಬೇಕು. ಅದು ಬಿಟ್ಟು ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡುವುದು ಸರಿಯಲ್ಲ. ಅಲ್ಲದೆ, ಇದೀಗ ಪಕ್ಷಾಂತರ ಮಾಡಲು ಕೋಟಿ ಕೋಟಿ ಆಫರ್‌ಗಳು ನೀಡುತ್ತಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿರುವವರು ಹಾಗೂ ಮಾನವೀಯತೆ ಇಲ್ಲದವರು ರಾಜಕೀಯ ವ್ಯವಸ್ಥೆಯೊಳಗೆ ಪ್ರವೇಶಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮತ್ತು ದೇಶದಲ್ಲಿ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಮಕ್ಕಳು, ಮೊಮ್ಮಕ್ಕಳಿಗಾಗಿಯೇ ರಾಜಕೀಯ ಪಕ್ಷಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದ ಅವರು, ಇತ್ತೀಚಿಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ನಡೆ ಅಸಹ್ಯ ಹುಟ್ಟಿಸುವಂತಿದೆ. ಪಾಲಿಕೆ ಚುನಾವಣೆಯಲ್ಲಿ ಬೇರೆ ಕಡೆಯಿಂದ ಬಂದು ಮತ ಹಾಕುವ ಅಗತ್ಯವೇನಿದೆ. ಹೀಗಾಗಿ, ಮುಂದಿನ ಚುನಾವಣೆ ವೇಳೆಗೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಇರುವ ನಿಯಮಾವಳಿ ತಿದ್ದುಪಡಿಯಾಗಲಿ. ಪಾಲಿಕೆಯ ಚುನಾಯಿತ ಸದಸ್ಯರಷ್ಟೇ ಮತ ಚಲಾಯಿಸುವ ಅವಕಾಶ ಕಲ್ಪಿಸಲಿ ಎಂದು ಆಗ್ರಹಪಡಿಸಿದರು.

ಚುನಾವಣೆ ಹಾಗೂ ರಾಜಕೀಯ ವ್ಯವಸ್ಥೆಯ ಮೂಲಬೇರು ಮತದಾರರ ಕೈಯಲ್ಲಿದೆ. ಹೀಗಾಗಿ, ಹಣ, ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡುವವರಿಗೆ ಜನರು ಸರಿಯಾದ ಪಾಠ ಕಲಿಸಬೇಕು. ಆ ಮೂಲಕ ಮತ್ತೆಂದೂ ಅವರು ತಪ್ಪು ಮಾಡದಂತೆ ಶಿಕ್ಷಿಸಬೇಕು ಎಂದು ಹರಿಶ್ಚಂದ್ರ ಭಟ್ ಕೋರಿದರು.

ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಝಾ ಮಾತನಾಡಿ, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೈದ್ಧಾಂತಿಕವಾಗಿ ಇಂದಿಗೂ ಆಡಳಿತ ನಡೆಸುತ್ತಿದ್ದಾರೆ. ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡು ಶಾಂತಿಯುತವಾದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಬಿಹಾರದಲ್ಲಿ ಎಂದಿಗೂ ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ, ಸಮಾಜವಾದದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಸೌಹಾರ್ದ ರಕ್ಷಣೆ ವಿಚಾರದಲ್ಲಿ ನಮ್ಮ ಸರಕಾರದ ನಿಲುವು ಸ್ಪಷ್ಟವಾಗಿದೆ. ರಾಜಕೀಯ ಎಂದರೆ ಅಧಿಕಾರ ಪಡೆಯುವುದು ಎಂಬ ಭಾವನೆ ತೆಗೆದು, ರಾಜಕೀಯ ಅಂದರೆ ನಂಬಿಕೆ ಮತ್ತು ಸೇವೆ ಎಂಬ ಸಮಾಜವಾದಿ ಆಶಯಗಳನ್ನು ಸಾಕಾರ ಮಾಡಿದ್ದಾರೆ ಎಂದು ನುಡಿದರು.

ಮತದಾರರನ್ನು ಸ್ನೇಹ, ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುತ್ತಿದ್ದೇವೆ. ಜೆ.ಎಚ್.ಪಟೇಲ್ ರೀತಿಯಲ್ಲಿಯೇ ನಿತೀಶ್ ಕುಮಾರ್ ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಕೆ.ಸಿ.ರೆಡ್ಡಿ ಮೊಮ್ಮಗಳು ಕವಿತಾರೆಡ್ಡಿ, ರಂಗಕಮಿರ್ ನಾಗರಾಜಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News