"ಸಮ್ಮಿಶ್ರ ಸರಕಾರ ಹಾಗೂ ವಿರೋಧ ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ದುಡಿಯಬೇಕು"
ಬೆಂಗಳೂರು, ಅ. 1: ಸಮ್ಮಿಶ್ರ ಸರಕಾರ ಹಾಗೂ ವಿರೋಧ ಪಕ್ಷಗಳು ಅಧಿಕಾರದ ಅಸ್ತಿತ್ವಕ್ಕಾಗಿ ಕಿತ್ತಾಡದೆ ರಾಜ್ಯದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಬಹುಜನ ಅಂಬೇಡ್ಕರ್ ಸಂಘದ ಎನ್.ಸಿ.ಜ್ಯೋತಿ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ದಂಗೆ ಏಳಲು ರಾಜ್ಯದ ಜನತೆಗೆ ಕರೆ ಕೊಡುತ್ತೇನೆ ಎಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂಬ ಹೇಳಿಕೆಯನ್ನು ಕೊಟ್ಟಿರುವುದು ಖಂಡನೀಯವಾದದ್ದು ಎಂದು ತಿಳಿಸಿದರು.
ದಂಗೆ ಏಳಲು ಬೆಂಕಿ ಹಚ್ಚಲು ಅಧಿಕಾರ ಕೊಟ್ಟಂತವರು ಯಾರು ಎಂಬುದನ್ನು ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳೆ ರಾಜ್ಯದ ಜನತೆಗೆ ತಿಳಿಸಬೇಕು. ಅಲ್ಲದೆ, ರಾಜ್ಯಕ್ಕೆ ಬೆಂಕಿ ಹಚ್ಚುವವರು ಮತ್ತು ದಂಗೆ ಎಬ್ಬಿಸುವವರಿಂದ ಯಾವುದೇ ಪ್ರಯೋಜನವಿಲ್ಲ. ಇವರಿಗೆ ಅಧಿಕಾರವನ್ನು ಕೊಟ್ಟಿರುವ ಮತದಾರರು ಮುಂದಿನ ಚುನಾವಣೆಯಲ್ಲಿ ಇಂತಹ ಪಕ್ಷಗಳನ್ನು ಸೋಲಿಸಬೇಕೆಂದು ಮನವಿ ಮಾಡಿದರು.