×
Ad

ಹೊಸ ಪಡಿತರ ಚೀಟಿಗೆ ಆನ್‌ಲೈನ್ ಅರ್ಜಿ ಆಹ್ವಾನ: ಸಚಿವ ಝಮೀರ್‌ ಅಹ್ಮದ್‌

Update: 2018-10-01 20:21 IST

ಬೆಂಗಳೂರು, ಅ.1: ಹೊಸದಾಗಿ ಪಡಿತರ ಚೀಟಿಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಪುನಃ ಆರಂಭಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ನಗರದ ತಿರುಮೇನಹಳ್ಳಿಯಲ್ಲಿರುವ ಹಜ್‌ಭವನದಲ್ಲಿ ಹಜ್‌ಕ್ಯಾಂಪಿನ ಸ್ವಯಂ ಸೇವಕರಿಗೆ ತಮ್ಮ ವೈಯಕ್ತಿಕ ಖರ್ಚಿನಿಂದ ಉಮ್ರಾ ಯಾತ್ರೆಗೆ ಆಯ್ಕೆ ಮಾಡುವ ಹಾಗೂ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಪಡಿತರ ಚೀಟಿಯ ಅರ್ಜಿಗಳ ವಿಲೇವಾರಿ ಸಾಧ್ಯವಾಗಿರಲಿಲ್ಲ. ಇದೀಗ ಸುಮಾರು 8.27 ಲಕ್ಷ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಎಲ್ಲರಿಗೂ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕುಟುಂಬದ ಎಲ್ಲ ಸದಸ್ಯರ ಆದಾಯ ಪ್ರಮಾಣ ಪತ್ರ ಪಡೆಯಲಾಗುತ್ತಿತ್ತು. ಅದಕ್ಕೆ ಕುಟುಂಬದ ಮುಖ್ಯಸ್ಥರೊಬ್ಬರ ಆದಾಯ ಪ್ರಮಾಣ ಪತ್ರವಿದ್ದರೆ ಸಾಕು ಬೇರೆ ಸದಸ್ಯರ ಪ್ರಮಾಣ ಪತ್ರದ ಅಗತ್ಯವಿಲ್ಲ ನಾನು ಸೂಚಿಸಿದ್ದೇನೆ. ಈಗ ಆನ್‌ಲೈನ್ ಮೂಲಕ ಮತ್ತೆ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ವಯಂ ಸೇವಕರಿಗೆ ಉಮ್ರಾ ಯಾತ್ರೆ: ಬೆಂಗಳೂರಿನಲ್ಲಿ ಕಳೆದ 22 ವರ್ಷಗಳಿಂದ ಹಜ್ ಕ್ಯಾಂಪ್ ನಡೆಯುತ್ತಿದೆ. ಹಜ್‌ಕ್ಯಾಂಪ್ ಯಶಸ್ವಿಯಾಗಲು ಯಾವ ಸರಕಾರ, ಸಚಿವರು ಕಾರಣರಲ್ಲ. ಸ್ವಯಂ ಸೇವಕರ ಪರಿಶ್ರಮವೇ ಕಾರಣ. ಸ್ವಯಂ ಸೇವಕರಲ್ಲಿ ಯಾರೂ ಶ್ರೀಮಂತರಿಲ್ಲ. ಮಾಸಿಕ 15-20 ಸಾವಿರ ರೂ.ಗಳನ್ನು ಸಂಪಾದನೆ ಮಾಡುವವರು. ಅದನ್ನು ತ್ಯಾಗ ಮಾಡಿ ಒಂದು ತಿಂಗಳು ಕಾಲ ಹಜ್‌ಯಾತ್ರೆಗೆ ತೆರಳುವವರ ಸೇವೆ ಮಾಡುತ್ತಾರೆ ಎಂದು ಅವರು ಹೇಳಿದರು.

ಸ್ವಯಂ ಸೇವಕರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಮಕ್ಕಾ, ಮದೀನಾ ಯಾತ್ರೆ ಮಾಡಬೇಕು ಎಂಬ ಆಸೆಯಿರುತ್ತದೆ. ಆದರೆ, 80, 90 ಸಾವಿರ ರೂ.ಗಳನ್ನು ಖರ್ಚು ಮಾಡಿ ಅವರು ಹೋಗಲು ಸಾಧ್ಯವಾಗುವುದಿಲ್ಲ. ಅಂತಹ 650 ಮಂದಿಯ ಪೈಕಿ 300 ಜನರನ್ನು ಮೊದಲ ಹಂತದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿದ್ದೇವೆ. ಮುಂದಿನ ವರ್ಷ ಇನ್ನುಳಿದ 350 ಮಂದಿ ಸ್ವಯಂ ಸೇವಕರನ್ನು ಕಳುಹಿಸಲು ಪ್ರಯತ್ನ ಮಾಡುತ್ತೇನೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಚಾಮರಾಜಪೇಟೆಯ 15 ಜನ ಯುವಕರು ಹಜ್ ಕ್ಯಾಂಪ್‌ನಲ್ಲಿ ದಿನದ 20 ಗಂಟೆ ಆಹಾರ ವಿಭಾಗದಲ್ಲಿ ದುಡಿದಿದ್ದಾರೆ. ಹಾವೇರಿಯಿಂದ 15 ಜನ ಯುವಕರ ತಂಡ 15 ದಿನ ಇಲ್ಲೆ ಉಳಿದುಕೊಂಡು ಯಾತ್ರಿಗಳ ಸೇವೆ ಮಾಡಿದ್ದಾರೆ. ಅವರನ್ನೂ ಉಮ್ರಾ ಯಾತ್ರೆಗೆ ಕಳುಹಿಸುತ್ತಿದ್ದೇನೆ. ಈ ಪೈಕಿ ಅಂಗವಿಕಲ ಯುವಕನೊಬ್ಬನೂ ಇದ್ದಾನೆ. ಅತನಿಗೆ ಇವತ್ತು ದ್ವಿಚಕ್ರ ವಾಹನವನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಮಡಿಕೇರಿಯಲ್ಲಿ ಇತ್ತೀಚೆಗೆ ಸುರಿದ ಭಾರಿಮಳೆಯಿಂದಾಗಿ ಸಂಭವಿಸಿದ ಅನಾಹುತದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು 11 ಜನ ಯುವಕರು ಸುಮಾರು 100 ಮಂದಿಯನ್ನು ರಕ್ಷಿಸಿದ್ದಾರೆ. ಆ ಯುವಕರನ್ನು ಉಮ್ರಾ ಯಾತ್ರೆಗೆ ಕಳುಹಿಸಲಾಗುತ್ತಿದೆ. ಜೊತೆಗೆ, ಸ್ವಯಂ ಸೇವಕರು, ಪೊಲೀಸ್ ಅಧಿಕಾರಿಗಳು, ಹಜ್ ಸಮಿತಿಯ ಅಧಿಕಾರಿಗಳು, ಸಿಬ್ಬಂದಿಗಳಿಗೂ ವೈಯಕ್ತಿಕವಾಗಿ ಸನ್ಮಾನಿಸಲಾಗಿದೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.

ವಿಮಾನ ನಿಲ್ದಾಣದ ಹಜ್ ಟರ್ಮಿನಲ್‌ನಲ್ಲಿ ವಿಮಾನ ನಿಲ್ದಾಣ, ಎಮಿಗ್ರೇಷನ್, ಕಸ್ಟಮ್ಸ್, ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೇರಿದಂತೆ 180 ಮಂದಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಅವರ ಪೈಕಿ ಮುಸ್ಲಿಂ ಅಧಿಕಾರಿಗಳಿಗೆ ಉಮ್ರಾ ಯಾತ್ರೆಗೆ ಹಾಗೂ ಅನ್ಯ ಧರ್ಮೀಯ ಅಧಿಕಾರಿಗಳಿಗೆ ಅವರ ಕುಟುಂಬ ಸಮೇತ ಅವರು ಬಯಸಿದ ತೀರ್ಥ ಕ್ಷೇತ್ರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News