×
Ad

ರಾಜ್ಯದಲ್ಲಿ ದಲೈಲಾಮ ಹತ್ಯೆಗೆ ಸಂಚು ನಡೆದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-10-01 21:44 IST

ಬೆಂಗಳೂರು, ಅ.1: ರಾಜ್ಯ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೌದ್ಧ ಧರ್ಮ ಗುರು ದಲೈಲಾಮ ಹತ್ಯೆಗೆ ನಮ್ಮ ರಾಜ್ಯದಲ್ಲಿ ಯಾವುದೇ ಸಂಚು ನಡೆದಿಲ್ಲ. ಇದೆಲ್ಲ ಕೇವಲ ಊಹಾಪೋಹ ಮಾತ್ರ. ದಲೈಲಾಮ ಹೆಸರನ್ನು ಯಾಕೆ ಎಳೆದು ತರಲಾಗುತ್ತಿದೆ ಎಂಬುದು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಸಂಬಂಧ ಎಲ್ಲ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿತ್ತು. ಅಧಿಕಾರಿಗಳು ರೈತರಿಗೆ ನೀಡಿರುವುದು ನೋಟಿಸ್ ಅಲ್ಲ ಎಂದು ಸ್ಪಷ್ಟಣೆ ನೀಡಿದರು.

ಬ್ಯಾಂಕುಗಳು ಹಾಗೂ ಅಧಿಕಾರಿಗಳು ರೈತರಿಗೆ ತಿಳುವಳಿಕೆ ಪತ್ರ ಕಳುಹಿಸಿದ್ದಾರೆ. ಆ ಪತ್ರ ರೈತರು ಸಾಲ ಮರು ಪಾವತಿ ಮಾಡಿ ಎಂದೇನಿಲ್ಲ. ಸರಕಾರ ಹಾಗೂ ಬ್ಯಾಂಕುಗಳ ನಡುವೆ ನಡೆದಿರುವ ಚರ್ಚೆಯ ಭಾಗವಾಗಿ ತಿಳುವಳಿಕೆ ಪತ್ರ ನೀಡಲಾಗುತ್ತಿದೆ ಎಂದರು.

ಪಾಂಡವಪುರದಲ್ಲಿ ಜವರೇಗೌಡ ಎಂಬವರು 2007ರಲ್ಲಿ ಸಾಲ ಮಾಡಿದ್ದರು. 2017ರಲ್ಲಿ ನೋಟಿಸ್ ನೀಡಲಾಗಿತ್ತು. ಹೀಗಾಗಿ, ಕೊನೆಯದಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ನೋಟಿಸ್ ಹೋಗಿದೆ. ಇದು ಈ ಸರಕಾರದ ಅವಧಿಯಲ್ಲಿ ಆಗಿರುವುದಲ್ಲ ಎಂದು ಅವರು ಹೇಳಿದರು. ಯಾವ ಬ್ಯಾಂಕ್ ಅಧಿಕಾರಿಗಳು ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಬಾರದು ಎಂದು ಈಗಾಗಲೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ರೈತರ ಸಾಲ ಮನ್ನಾ ಹುಡುಗಾಟವಲ್ಲ, ಸಾಲ ಮನ್ನಾ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾವು ಹಾಗೂ ಕಾಂಗ್ರೆಸ್ ಪಕ್ಷದವರು ಕೂತು ಚರ್ಚೆ ಮಾಡುತ್ತೇವೆ. ಆದಷ್ಟು ಬೇಗ ಸಂಪುಟ ವಿಸ್ತರಣೆಯಾಗಲಿದೆ. ಅಗತ್ಯವಿದ್ದರೆ ಕೆಲ ಸಚಿವರ ಖಾತೆಗಳನ್ನು ಬದಲಾವಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಲೋಕೋಪಯೋಗಿ ಇಲಾಖೆಯು ಎಲ್ಲ ಇಲಾಖೆಯ ಮಾತೃ ಇಲಾಖೆ. ವಿವಿಧ ಇಲಾಖೆಗಳಿಗೆ ಇಲ್ಲಿಂದ 13 ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟು 4567 ಅಧಿಕಾರಿಗಳು ಇದ್ದಾರೆ. ಈ ಪೈಕಿ 526 ಅಧಿಕಾರಿಗಳನ್ನು ಮಾತ್ರ ವರ್ಗಾವಣೆ ನೀತಿಯ ಅಡಿಯಲ್ಲೆ ವರ್ಗಾವಣೆ ಮಾಡಲಾಗಿದೆ. ಎಲ್ಲಿಯೂ ಬೇಕಾಬಿಟ್ಟಿ ವರ್ಗಾವಣೆ ಮಾಡಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News