ಇಂಡೋನೇಶ್ಯ ಭೂಕಂಪ, ಸುನಾಮಿ: ಸಾವಿನ ಸಂಖ್ಯೆ 1,234ಕ್ಕೇರಿಕೆ

Update: 2018-10-02 15:25 GMT

ಜಕಾರ್ತ, ಅ.2: ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಶುಕ್ರವಾರ ಸಂಭವಿಸಿದ್ಧ ಭೂಕಂಪ ಹಾಗೂ ಸುನಾಮಿಯಲ್ಲಿ ಮೃತಪಟ್ಟವರ ಸಂಖ್ಯೆ 844ರಿಂದ 1,234ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ತಡೆ ಘಟಕ ಮಂಗಳವಾರ ದೃಢಪಡಿಸಿದೆ.

 ಶುಕ್ರವಾರದಂದು ಇಂಡೋನೇಶ್ಯದ ತೀರದಲ್ಲಿ ಸಂಭವಿಸಿದ 7.5 ತೀವ್ರತೆಯ ಭೂಕಂಪದಿಂದ ಎದ್ದ ಬೃಹತ್ ಅಲೆಗಳು ಸುಲವಸಿ ದ್ವೀಪಕ್ಕೆ ಅಪ್ಪಳಿಸಿತ್ತು. 800 ಕಿ.ಮೀ. ವೇಗದಲ್ಲಿ ನುಗ್ಗಿದ ಸಮುದ್ರನೀರು ಹರಿದ ದಾರಿಯಲ್ಲಿ ಸಿಕ್ಕ ಶಾಪಿಂಗ್ ಮಾಲ್‌ಗಳು, ಪ್ರಾರ್ಥನಾಲಯಗಳು, ಶಾಲೆಗಳು ಇತ್ಯಾದಿ ಯಾವುದನ್ನೂ ಬಿಡದೇ ಧ್ವಂಸ ಮಾಡಿದೆ.

1,700 ಮನೆಗಳ ಸಮಾಧಿ

   ಭೂಕಂಪದ ವೇಳೆ, ಪಲು ನಗರ ಮತ್ತು ಅದರ ಸುತ್ತಮುತ್ತಲ ಹಲವು ಪ್ರದೇಶಗಳಲ್ಲಿ ವಿಚಿತ್ರ ದುರಂತವೊಂದು ಕಾಣಿಸಿಕೊಂಡಿದೆ. ಅಂದರೆ, ಭೂಕಂಪದಿಂದಾಗಿ ಅದುರಿದ ಮಣ್ಣು ದ್ರವದಂತೆ ವರ್ತಿಸಿದೆ.

ಇದರಿಂದಾಗಿ ಒಂದು ಉಪನಗರದಲ್ಲಿನ ಸುಮಾರು 1,700 ಮನೆಗಳು ಭೂಮಿಯೊಳಗೆ ಮುಳುಗಿದೆ. ಮನೆಯಲ್ಲಿದ್ದ ನೂರಾರು ಜನರು ಅದರೊಳಗೆ ಜೀವಂತ ಸಮಾಧಿಯಾಗಿದ್ದಾರೆ ಎಂಬ ಭೀತಿ ವ್ಯಕ್ತವಾಗಿದೆ.

ಈ ಪ್ರದೇಶದಲ್ಲಿ ಈ ರೀತಿಯಾಗಿ ಮೃತಪಟ್ಟವರ ಪೈಕಿ 34 ಮಕ್ಕಳಿದ್ದಾರೆ ಎಂದು ರೆಡ್ ಕ್ರಾಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆ ಸಂದರ್ಭದಲ್ಲಿ ಈ ಮಕ್ಕಳು ಕ್ರಿಶ್ಚಿಯನ್ ಬೈಬಲ್ ಅಧ್ಯಯನ ಶಿಬಿರದಲ್ಲಿದ್ದರು.

ಅಂಗಡಿಗಳ ಲೂಟಿಯಲ್ಲಿ ತೊಡಗಿರುವ ಹಸಿದ ಸಂತ್ರಸ್ತರು

ಇಂಡೋನೇಶ್ಯದ ಭೂಕಂಪ ಮತ್ತು ಸುನಾಮಿ ಬಾಧಿತ ಸುಲವೆಸಿ ದ್ವೀಪದಲ್ಲಿ ಲೂಟಿಯಲ್ಲಿ ತೊಡಗಿದ ಹತ್ತಾರು ಜನರನ್ನು ಬಂಧಿಸಲಾಗಿದೆ ಎಂದು ಇಂಡೋನೇಶ್ಯ ಪೊಲೀಸರು ಮಂಗಳವಾರ ಹೇಳಿದ್ದಾರೆ.

ಅಲ್ಲಿ ಭೂಕಂಪ ಮತ್ತು ಸುನಾಮಿ ಸಂತ್ರಸ್ತರು ನೀರು, ಆಹಾರ ಮತ್ತು ಇತರ ವಸ್ತುಗಳಿಗಾಗಿ ಅಂಗಡಿಗಳ ಲೂಟಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

''ಮೊದಲ ಮತ್ತು ಎರಡನೇ ದಿನ ಯಾವುದೇ ಅಂಗಡಿ ತೆರೆದಿರಲಿಲ್ಲ. ಜನರು ಹಸಿದಿದ್ದರು. ಜನರಿಗೆ ಆಹಾರದ ಅಗತ್ಯವಿತ್ತು. ಜನರು ಲೂಟಿ ಮಾಡಿದರು. ಅದೊಂದು ಸಮಸ್ಯೆಯಲ್ಲ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

''ಅವರು ಲ್ಯಾಪ್‌ಟಾಪ್‌ಗಳನ್ನು ಒಯ್ದರೆ, ಅವರು ಹಣ ಕದ್ದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News