ಮಹಾತ್ಮ ಗಾಂಧಿ ತತ್ವಗಳು ಸಾರ್ವಕಾಲಿಕ: ಎನ್.ಆರ್.ವಿಶುಕುಮಾರ್

Update: 2018-10-02 13:06 GMT

ಬೆಂಗಳೂರು, ಅ.2: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅತ್ಯಂತ ಸುಂದರವಾದ ಗಾಂಧೀ ಅಂಗಳವನ್ನು ನಿರ್ಮಿಸಿದ ಸಂತಸ ತಮಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹೇಳಿದ್ದಾರೆ. 

ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಅವರ 150ನೆ ಜನ್ಮವರ್ಷಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧಿ ತತ್ವಗಳನ್ನು ಸಾರುವ ಉದ್ದೇಶದಿಂದ ಹಾಗೂ ಉತ್ತಮವಾದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ವಾರ್ತಾ ಇಲಾಖೆಯ ಕೇಂದ್ರ ಕಚೇರಿಯ ಆವರಣದಲ್ಲಿ ಗಾಂಧಿ ಅಂಗಳವನ್ನು ನಿರ್ಮಿಸಲಾಯಿತು ಎಂದು ಹೇಳಿದರು.

ಇಲಾಖೆಯ ಗಾಂಧಿ ಅಂಗಳಕ್ಕೆ ನಾಡಿನ ಅನೇಕ ಗಣ್ಯ ವ್ಯಕ್ತಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದ್ದು ಗಾಂಧೀಜಿ ಅವರ ತತ್ವಗಳು ಸಾರ್ವಕಾಲಿಕ. ಮಹಾತ್ಮಾ ಗಾಂಧಿ ಅವರು ಅಹಿಂಸಾ ಮಾರ್ಗದ ಮೂಲಕ ತೋರಿದ ಪ್ರತಿಭಟನೆ ಅಸ್ತ್ರ ಇಂದು ವಿಶ್ವಾದ್ಯಂತ ಅತ್ಯುತ್ತಮವಾದ ಮಾರ್ಗವಾಗಿದೆ. ಅದಕ್ಕಾಗಿ ಇಂದು ವಿಶ್ವದಲ್ಲಿ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾವುದೇ ಸೌಲಭ್ಯವಿಲ್ಲದ ಕಾಲದಲ್ಲಿ ಭಾರತವನ್ನು ಸುತ್ತಿದ ಮಹಾತ್ಮಾ ಗಾಂಧಿ ಅವರು ಕರ್ನಾಟಕಕ್ಕೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ರಾಜ್ಯದ ನಂದಿಬೆಟ್ಟ ಅವರ ನೆಚ್ಚಿನ ಸ್ಥಳವಾಗಿತ್ತು. ಇಂದು ಇಲಾಖೆಯಲ್ಲಿ ನಿರ್ಮಿಸಿರುವ ಗಾಂಧಿ ಅಂಗಳ ಇತರೆ ಇಲಾಖೆಗಳಿಗೆ ಮಾದರಿಯಾಗಿದೆ ಹಾಗೂ ನಮ್ಮ ಇಲಾಖೆಗೆ ಕಳಸವಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ಮಹಾತ್ಮಾ ಗಾಂಧಿ ಅವರ 150 ನೆ ಜನ್ಮ ವರ್ಷಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಗಾಂಧಿ ತತ್ವಗಳನ್ನು ಸಾರುವ ಕಾರ್ಯಕ್ರಮಗಳ ಸಮನ್ವಯ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಮಹಾತ್ಮಾ ಗಾಂಧಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಇಲಾಖೆಯ ಜಂಟಿ ನಿರ್ದೇಶಕರುಗಳಾದ ಎಂ. ರವಿಕುಮಾರ್, ಎನ್.ಭೃಂಗೀಶ್, ಎಚ್.ಬಿ. ದಿನೇಶ್ ಹಾಗೂ ಎ.ಆರ್ . ಪ್ರಕಾಶ್ ಸೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News