ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗಾಂಧಿಭವನ ನಿರ್ಮಾಣ: ಎಚ್.ಡಿ.ಕುಮಾರಸ್ವಾಮಿ

Update: 2018-10-02 13:16 GMT

ಬೆಂಗಳೂರು, ಅ.2: ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳಲ್ಲೂ ಗಾಂಧಿ ಭವನ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಬಾ ಮತ್ತು ಬಾಪು 150ನೆ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೆ 16 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಗುರುತಿಸಲಾಗಿದೆ. ಮುಂದಿನ 15-20ದಿನಗಳಲ್ಲಿ ಉಳಿದ 14 ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಿ, ಸುಸಜ್ಜಿತವಾದಂತಹ ಗಾಂಧಿ ಭವನವನ್ನು ನಿರ್ಮಿಸಲು ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಕೇವಲ ಜಿಲ್ಲೆಗೊಂದು ಗಾಂಧಿಭವನ ನಿರ್ಮಿಸಿ ಸುಮ್ಮನಾಗುವುದಿಲ್ಲ. ಪ್ರತಿದಿನ ಗಾಂಧೀಜಿ ಅವರ ವಿಚಾರಗಳನ್ನು ಸ್ಮರಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಹಾಗೂ ಯುವ ಜನತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಮಹಿಳೆಯರ ರಕ್ಷಣೆಗೆ ಬದ್ಧ: ಮಧ್ಯರಾತ್ರಿ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ತಿರುಗಾಡುವಂತಹ ವಾತಾವರಣವಿದ್ದಾಗ ಮಾತ್ರ ದೇಶದಲ್ಲಿ ನಿಜವಾದ ಸ್ವಾತಂತ್ರವಿದೆ ಎಂದರ್ಥದ ಮಾತುಗಳನ್ನಾಡಿದ್ದರು ಗಾಂಧೀಜಿ. ಅವರ ಮಾತನ್ನು ನನಸು ಮಾಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೀಡು ಬಿಟ್ಟಿರುವ ಇಸ್ಪೀಟ್ ದಂಧೆ, ಭೂ ಮಾಫಿಯಾ ಹಾಗೂ ಸರಗಳ್ಳರ ಕಡಿವಾಣಕ್ಕೆ ಪೊಲೀಸ್ ಇಲಾಖೆಗೆ ಎಲ್ಲ ಸ್ವಾತಂತ್ರವನ್ನು ನೀಡಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವಂತಹ ಕೆಲಸಕ್ಕೆ ಯಾರೆ ಮುಂದಾದರು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಜಯಶ್ರೀ ಟ್ರಸ್ಟ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕವಿ ಬೊಳುವಾರು ಮುಹಮ್ಮದ್ ಕುಂಞಿ ಮಾತನಾಡಿ, ಇವತ್ತಿನ ಸಮಾಜದಲ್ಲಿ ಯುವ ಸಮುದಾಯಕ್ಕೆ ಮಾದರಿಯಾಗುವಂತಹ ಆದರ್ಶ ವ್ಯಕ್ತಿಗಳು ಇಲ್ಲವಾಗಿದ್ದಾರೆ. ಹೀಗಾಗಿ ನಾವು ಪದೇ ಪದೇ ಗಾಂಧೀಜಿಯವರ ಜೀವನ ವಿಧಾನಗಳನ್ನೆ ಉದಾಹರಿಸಬೇಕಾಗಿದೆ ಎಂದು ತಿಳಿಸಿದರು.

ಇವತ್ತು ಎಲ್ಲರೂ ಒಂದು ಸಿದ್ಧಾಂತಕ್ಕೆ, ಒಂದು ಸಂಘಟನೆಗೆ ಜೋತು ಬಿದ್ದಿದ್ದೇವೆ. ಹೀಗಾಗಿ ಸಮಾಜದಲ್ಲಿರುವ ಭಿನ್ನ ವ್ಯಕ್ತಿಗಳ, ಸಿದ್ಧಾಂತಗಳ ಕುರಿತು ಪೂರ್ವಗ್ರಹ ಪೀಡಿತರಾಗಿರುತ್ತಾರೆ. ಇದರಿಂದ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕಷ್ಟ ಸಾಧ್ಯವಾಗಿದೆ ಎಂದು ಅವರು ವಿಷಾದಿಸಿದರು.

ಮಹಾತ್ಮ ಗಾಂಧೀಜಿ ಮುಸ್ಲಿಮ್ ಪರವಾಗಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಗಾಂಧೀಜಿಯವರು ಯಾವುದೆ ಒಬ್ಬ ವ್ಯಕ್ತಿಯ, ಜಾತಿಯ, ಧರ್ಮದ ಪರವಾಗಿರಲಿಲ್ಲ. ಒಟ್ಟು ಮಾನವೀಯ ಮೌಲ್ಯಗಳ ಪರವಾಗಿದ್ದರು. ಆದರೆ, ಅವರನ್ನು ಕೊಂದವರು ಗಾಂಧೀಜಿಯ ಬದುಕಿನ ಸಾರ ಅರಿಯುವಲ್ಲಿ ಸೋತಿದ್ದರು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕಗಳ ಗಾಂಧಿ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು. ಹಾಗೂ ಗಾಂಧೀಜಿಯವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾಜಿ ಸಚಿವ ಎಚ್.ಕೆ.ಪಾಟೀಲ್, ಎಂ.ವಿ.ರಾಜಶೇಖರನ್, ಗಾಂಧಿ ಭವನದ ಅಧ್ಯಕ್ಷ ವೂಡೆ ಪಿ.ಕೃಷ್ಣ, ಹಿರಿಯ ಗಾಂಧಿವಾದಿ ಚೆನ್ನಮ್ಮ ಹಳ್ಳಿಕೇರಿ, ಗಾಂಧಿ ಭವನದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರಿದ್ದರು.

ಮದ್ಯದಂಗಡಿಗೆ ಪರವಾನಿಗೆ ಇಲ್ಲ

ಮದ್ಯದಂಗಡಿಗೆ ಪರವಾನಿಗೆ ಕೊಡುವಂತೆ ನಾನು ಯಾರಿಗೂ ಸೂಚಿಸಿಲ್ಲ. ಈ ಬಗ್ಗೆ ಪ್ರಸ್ತಾಪವು ಬಂದಿಲ್ಲ. ಆದರೆ, ಮಾಧ್ಯಮಗಳು ನನ್ನ ವಿರುದ್ಧ ಎರಡು ಮುಖದ ಕುಮಾರಸ್ವಾಮಿ ಎಂದು ಅಪಪ್ರಚಾರ ಮಾಡಿವೆ. ಮಾಧ್ಯಮಗಳು ಪೂರ್ವಾಪರ ವಿವೇಚಿಸಿ ಸುದ್ದಿ ಮಾಡಬೇಕು.

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News